ಪ್ರಜಾಪ್ರಭುತ್ವ, ಸಂವಿಧಾನ ಉಳಿಸಿದೇ ಹೋದರೆ ಮೋದಿ ಸರ್ವಾಧಿಕಾರಿಯಾಗ್ತಾರೆ, ಚುನಾವಣೆಗಳು ಇಲ್ಲದಾಗ್ತವೆ, ಮಾಧ್ಯಮಗಳು, ಸ್ವತಂತ್ರ ಸಂಸ್ಥೆಗಳಿಗೆ ಕಂಟ್ರೋಲ್ ಹೇರಲಾಗ್ತದೆ : ಎಐಸಿಸಿ ಅಧ್ಯಕ್ಷರ ಆತಂಕ
ಮಂಗಳೂರು, ಫೆಬ್ರವರಿ 18, 2024 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಸರಕಾರದ ಯೋಜನೆಗಳ ಭರಪೂರ ಲಾಭ ಪಡೆದುಕೊಂಡು ಬದುಕು ಕಟ್ಟಿಕೊಂಡವರೇ ಇಂದು ತಮ್ಮ ಋಣ ಮರೆತು ಕಾಂಗ್ರೆಸ್ ಪಕ್ಷವನ್ನು ವಿಮರ್ಶಿಸುತ್ತಿರುವುದು ಅತ್ಯಂತ ವಿಷಾದನೀಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಖೇದ ವ್ಯಕ್ತಪಡಿಸಿದರು.
ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ಅಪರಾಹ್ನ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭೂಸುಧಾರಣೆ ಕಾನೂನು ಜಾರಿ ಮಾಡುವ ಮೂಲಕ ಬಡಜನರನ್ನು ಭೂಮಾಲಿಕರನ್ನಾಗಿ ಮಾಡಿದ್ದು ಕಾಂಗ್ರೆಸ್ ಸರಕಾರ. ಆದರೆ ಇದೀಗ ಅಂತಹವರ ಮಕ್ಕಳೇ ಭಗವಾಧ್ವಜ ಹಿಡಿದು ಧರ್ಮದ ಅಮಲೇರಿಸಿಕೊಂಡು ತಿರುಗಾಟ ನಡೆಸುತ್ತಿದ್ದಾರೆ ಎಂದು ವಿಷಾದಿಸಿದರು.
ಕಾಂಗ್ರೆಸ್ ಪಕ್ಷದ ಯೋಜನೆಗಳಾದ ಭೂಸುಧಾರಣೆ ಮೂಲಕ ಭೂಮಿ ಪಡೆದು, ಆಹಾರ ಭದ್ರತಾ ಕಾಯ್ದೆಯ ಮೂಲಕ ಆಹಾರದ ಹಕ್ಕು ಪಡೆದು, ಸರ್ವರಿಗೂ ಶಿಕ್ಷಣ ಎಂಬ ಕಾನೂನಿನ ಮೂಲಕ ಉಚಿತ ಶಿಕ್ಷಣ ಪಡೆದು ಕಾಂಗ್ರೆಸ್ ವಿರುದ್ದ ಮಾತನಾಡುವವರು ಒಮ್ಮೆ ಹಿಂತಿರುಗಿ ನೋಡಿ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದ ಖರ್ಗೆ ಮೋದಿ ನೀಡಿದ ಭರವಸೆಗಳು ಯಾವುದೂ ಕೂಡಾ ಕೈಗೆಟುಕದೆ ಇದ್ದರೂ ಕೂಡಾ ಕರಾವಳಿ ಜಿಲ್ಲೆಗಳಲ್ಲಿ ಅದೇಕೆ ಬಿಜೆಪಿ ಧ್ವಜ ಹಾರಾಡ್ತಾ ಇದೆ ಎಂದು ಕಾರ್ಯಕರ್ತರಿಗೆ ಪ್ರಶ್ನಿಸಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಎಲ್ಲ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ಕಾಂಗ್ರೆಸ್. ಆದರೆ ಜಿಲ್ಲೆಯ ಅಭಿವೃದ್ದಿಯ ಉತ್ತುಂಗದಲ್ಲಿದ್ದ ಬ್ಯಾಂಕ್ ಗಳನ್ನು ಇತರ ಜಿಲ್ಲೆಗಳ ಬ್ಯಾಂಕುಗಳೊಂದಿಗೆ ವಿಲೀನ ಮಾಡಿ ಜಿಲ್ಲೆಯ ಹೆಸರನ್ನು ಇತಿಹಾಸದಲ್ಲ ಮಂಗ ಮಾಯ ಮಾಡಿದ್ದೇ ಮೋದಿ ಸಾಧನೆ ಎಂದು ಟೀಸಿ ಮಲ್ಲಿಕಾರ್ಜುನ ಖರ್ಗೆ ಮೋದಿ ಮಾತು ಕೇಳಿ ಜನ ಧರ್ಮ-ಜಾತಿ ಎಂದು ಬಡಿದಾಡಿಕೊಂಡದ್ದು ಬಿಟ್ಟರೆ ಬೇರೇನೂ ಇಲ್ಲ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸರಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ಕಾರ್ಯಕರ್ತರ ಉತ್ಸಾಹದ ಕಾರ್ಯವೈಖರಿ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಖರ್ಗೆ ಮೋದಿ ಅಧಿಕಾರಕ್ಕೇರಿದ 10 ವರ್ಷಗಳಲ್ಲಿ ಮಾಡಿದ್ದೇನೂ ಇಲ್ಲ. ಯಾವುದೇ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡಲು ಇಲ್ಲದ ಮೋದಿ ದಿನಬೆಳಗಾದರೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಾಯಕರಿಗೆ ಬೈಯುತ್ತಿದ್ದಾರೆ ಎಂದು ಟೀಕಿಸಿದರು.
ಕುದ್ಮುಲ್ ರಂಗರಾವ್, ಶ್ರೀನಿವಾಸ್ ಮಲ್ಯ, ಜನಾರ್ದ ಪೂಜಾರಿ, ವೀರಪ್ಪ ಮೊಯಿಲಿ ಅವರಂತಹ ಜನತೆಗೆ ಕೊಡುಗೆ ನೀಡಿದ ಜಿಲ್ಲೆ ಇದು. ಬುದ್ದಿವಂತರ ಜಿಲ್ಲೆ. ಈ ಜಿಲ್ಲೆಗಳಲ್ಲಿ ಮುಂದಿನ ಬಾರಿ ಕಾಂಗ್ರೆಸ್ ಪತಾಕೆ ಹಾರಾಡುವುದು ಶತಸ್ಸಿದ್ದ ಎಂದರು.
ಈ ದೇಶದ ಜನತೆಗೆ ವೋಟಿನ ಅಧಿಕಾರ ಸಿಕ್ಕಿದ್ದು ಕಾಂಗ್ರೆಸ್ ಕಾಲದಲ್ಲಿ. ಕಾಂಗ್ರೆಸ್ ಈ ದೇಶಕ್ಕೆ ಉದಾತ್ತ ಸಂವಿಧಾನ ಕೊಟ್ಟ ಮೇಲೆ ದೇಶದ ಪ್ರತಿ ಪ್ರಜೆಗೆ ವೋಟಿನ ಹಕ್ಕು ದೊರೆತಿದೆ. ಈ ದೇಶದ ಪ್ರಜಾಪ್ರಭುತ್ವ, ಈ ದೇಶದ ಸಂವಿಧಾನ ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಲ್ಲದಿದ್ದಲ್ಲಿ ಮೋದಿ ಸರ್ವಾಧಿ ಆಗ್ತಾರೆ. ದೇಶದಲ್ಲಿ ಚುನಾವಣೆಗಳು ಇಲ್ಲದೆ ಆಗ್ತವೆ. ಮಾಧ್ಯಮಗಳ ಮೇಲೂ ಕಂಟ್ರೋಲ್, ಎಲ್ಲಾ ಸ್ವತಂತ್ರ ಸಂಸ್ಥೆಗಳ ಮೇಲೂ ಕಂಟ್ರೋಲ್ ಹೇರಲಾಗುತ್ತದೆ ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದರು.
0 comments:
Post a Comment