ಬಂಟ್ವಾಳ, ಫೆಬ್ರವರಿ 16, 2024 (ಕರಾವಳಿ ಟೈಮ್ಸ್) : ಕಾರ್ಮಿಕ ಸಂಘಟನೆಗಳಿಂದ ದೇಶಾದ್ಯಂತ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಶುಕ್ರವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಯಿತು.
ಆಹಾರ, ಆರೋಗ್ಯ, ಶಿಕ್ಷಣ ಮಕ್ಕಳ ಹಕ್ಕಾಗಬೇಕು, ಕೇಂದ್ರ ಸರಕಾರವು ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಅನುದಾನ ನೀಡಬೇಕು, ಕನಿಷ್ಠ ಕೂಲಿ 31 ಸಾವಿರ ರೂಪಾಯಿ ಜಾರಿಯಾಗಬೇಕು, ಚುನಾವಣಾ ಸಂದರ್ಭದಲ್ಲಿ ನೀಡಿದ ಆರನೇ ಗ್ಯಾರಂಟಿಯಾದ ಬಿಸಿಯೂಟ ನೌಕರರಿಗೆ 6 ಸಾವಿರ ರೂಪಾಯಿ ವೇತನ ಮತ್ತು ನಿವೃತ್ತಿ ಸೌಲಭ್ಯ ಜಾರಿ ಮಾಡಬೇಕು, ಪ್ರತಿ ತಿಂಗಳ 5ನೇ ತಾರೀಕಿನೊಳಗೆ ವೇತನ ನೀಡಬೇಕು, ನಿವೃತ್ತಿ ಆದವರಿಗೆ ಮಾಸಿಕ ಪಿಂಚಣಿ 10 ಸಾವಿರ ರೂಪಾಯಿ ಜಾರಿ ಮಾಡಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, 29 ಕಾರ್ಮಿಕ ಕಾನೂನುಗಳನ್ನು 4 ಕಾರ್ಮಿಕ ಸಂಹಿತೆಗಳನ್ನಾಗಿ ರೂಪಿಸಿರುವ ಕ್ರಮ ಹಿಂಪಡೆಯಬೇಕು, 4ನೇ ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್‍ಸಿ) ಶಿಫಾರಸ್ಸು ಜಾರಿ ಮಾಡಬೇಕು, ಬಿಸಿಯೂಟ ನೌಕರರಿಗೆ ಪರಿಹಾರ ನೀಡದೇ ನಿವೃತ್ತಿ ಮಾಡಬಾರದು, ಈಗಾಗಲೇ ನಿವೃತ್ತಿ ಆದವರಿಗೆ ಇಡಿಗಂಟು ನೀಡಬೇಕು, ಬಿಸಿಯೂಟ ಸಿಬ್ಬಂದಿಯ ಕೆಲಸದ ಅವಧಿ 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು, ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ತರಬೇಕು ಇತ್ಯಾದಿ ಬೇಡಿಕೆ ಈಡೇರಿಕಾಗಿ ನೌಕರರು ಈ ಪ್ರತಿಭಟನೆಯನ್ನು ನಡೆಸಿದ್ದಾರೆ.
ಎಐಸಿಸಿಟಿಯು ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷ ಜಯಶ್ರೀ ಆರ್ ಕೆ, ಕಾರ್ಯದರ್ಶಿ ವಾಣಿಶ್ರೀ, ಸಿಪಿಎಂಎಲ್ ಜಿಲ್ಲಾ ಸದಸ್ಯ ಸಜೇಶ್ ಕೊಡಂಗೆ, ಅಕ್ಷರ ದಾಸೋಹ ನೌಕರರಾದ ವಿನಯ ನಡುಮೊಗರು, ಲವೀನಾ ಲೂಯಿಸ್, ಮಮತಾ ಬಿಳಿಯೂರು, ಶಕುಂತಲಾ ಕಾಡುಮಠ, ಪ್ರೇಮಾ ವಿಟ್ಲ, ಅನಿಸುರಿಬೈಲು, ಸೇವಂತಿ ಪಲ್ಲಿಪ್ಪಾಡಿ, ರೇಖಾ ನೇರಳಕಟ್ಟೆ, ಪೂರ್ಣಿಮಾ ಕಾರ್ಲ, ಶಾಲಿನಿ, ಪುಷ್ಪಾವತಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಳಿಕ ತಾಲೂಕು ತಹಶೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.
0 comments:
Post a Comment