ಬಂಟ್ವಾಳ, ಫೆಬ್ರವರಿ 03, 2024 (ಕರಾವಳಿ ಟೈಮ್ಸ್) : ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಬದಲಾಯಿಸಲು ಮನಸ್ಸು ಮಾಡಿದರೆ ಈ ಬಾರಿ ಬಿಜೆಪಿ ನಾಯಕ ಜಿತೇಂದ್ರ ಎಸ್ ಕೊಟ್ಟಾರಿ ಅವರಿಗೆ ಅವಕಾಶ ನೀಡುವಂತೆ ಬಂಟ್ವಾಳ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಜಿಲ್ಲೆಯ ಬಿಜೆಪಿ ವಲಯದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡು ಪಕ್ಷದ ಹಲವು ಹುದ್ದೆಗಳನ್ನು ನಿಷ್ಠಾವಂತರಾಗಿ ನಿಭಾಯಿಸಿ ಪ್ರಸ್ತುತ ಜಿಲ್ಲಾ ಬಿಜೆಪಿ ಸಮಿತಿಯಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜಿತೇಂದ್ರ ಎಸ್ ಕೊಟ್ಟಾರಿ ಅಭ್ಯರ್ಥಿ ಬದಲಾವಣೆ ಮಾಡಲು ಬಯಸಿದರೆ ಸೂಕ್ತ ಆಯ್ಕೆಯಾಗಿದ್ದಾರೆ. ಪಕ್ಷದೊಳಗೆ ಯಾವುದೇ ಭಿನ್ನಮತಕ್ಕೂ ಅವಕಾಶ ನೀಡದ ಸಕ್ರಿಯ ಹಾಗೂ ನಿಷ್ಠಾವಂತ ಕಾರ್ಯಕರ್ತರಾಗಿ ಇದುವರೆಗೂ ಯಾವುದೇ ಉನ್ನತ ಹುದ್ದೆ ಮೇಲೆ ಕಣ್ಣಿಡದೆ, ಕೇಳಿಯೂ ಪಡೆಯದೆ ಪಕ್ಷ ತನ್ನ ಪಾಲಿಗೆ ನೀಡಿದ ಹುದ್ದೆಗಳನ್ನು ಜವಾಬ್ದಾರಿಗಳನ್ನು ಅತ್ಯಂತ ಸೂಕ್ತವಾಗಿ ಸ್ವಚ್ಛವಾಗಿ ನಿಭಾಯಿಸಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಹಾಗೂ ನಾಯಕರ ಪಾಲಿಗೆ ನಿಷ್ಠಾವಂತರಾಗಿ ಕಂಡ ಓರ್ವ ನಾಯಕರಾಗಿದ್ದಾರೆ ಜಿತೇಂದ್ರ ಎಸ್ ಕೊಟ್ಟಾರಿ ಎನ್ನುವ ಬಂಟ್ವಾಳದ ಬಿಜೆಪಿ ಕಾರ್ಯಕರ್ತರು ಈ ಹಿಂದೊಮ್ಮೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಇವರಿಗೆ ನೀಡಲು ಕಾರ್ಯಕರ್ತರು ಪಕ್ಷದ ಮುಖಂಡರ ಜೊತೆ ಆಗ್ರಹಿಸಿದ್ದಾರಾದರೂ ಬಳಿಕ ನಡೆದ ಬೆಳವಣಿಗೆಯಲ್ಲಿ ಪಕ್ಷದ ತೀರ್ಮಾನಕ್ಕೆ ಇವರು ಹಾಗೂ ಕಾರ್ಯಕರ್ತರು ಬದ್ದರಾಗಿ ಕೆಲಸ ಮಾಡಿದ್ದರು.
ಈ ಬಾರಿಯೂ ಪಕ್ಷದ ನಾಯಕರ ತೀರ್ಮಾನಕ್ಕೆ ಕೊಟ್ಟಾರಿ ಹಾಗೂ ಕಾರ್ಯಕರ್ತರು ಬದ್ದರಾಗಿದ್ದೇವಾದರೂ ಲೋಕಸಭಾ ಚುನಾವಣೆ ವೇಳೆ ಹಾಲಿ ಸಂಸದರಿಗೆ ವಿಶ್ರಾಂತಿ ನೀಡಲು ಬಯಸಿದರೆ ಹೊಸ ಮುಖವಾಗಿ ಮೂಲತಃ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಜಿತೇಂದ್ರ ಎಸ್ ಕೊಟ್ಟಾರಿ ಅವರನ್ನು ಪಕ್ಷದ ನಾಯಕರು ಪರಿಗಣಿಸಿ ನಿಷ್ಠಾವಂತರಿಗೆ ಮಣೆ ಹಾಕುವಂತೆ ಬಂಟ್ವಾಳದ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಅತ್ತ ಪುತ್ತೂರು ಬಿಜೆಪಿಯಲ್ಲಿ ಪಕ್ಷದೊಳಗಿನ ಬಂಡಾಯ ಶಮನಕ್ಕಾಗಿ ಪಕ್ಷದ ನಾಯಕರು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಮಧ್ಯೆ ಇತ್ತ ಬಂಟ್ವಾಳದಲ್ಲೂ ಕಾರ್ಯಕರ್ತರು ಬದಲಾವಣೆ ಬಯಸಿ ಪಕ್ಷ ಮುಖಂಡರಿಗೆ ಒತ್ತಾಯ ಮಾಡುತ್ತಿರುವ ಬೆಳವಣಿಗೆ ಜಿಲ್ಲೆಯ ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಯಾವುದಕ್ಕೂ ಕಾರ್ಯಕರ್ತರ ಪಕ್ಷವಾಗಿರುವ ಬಿಜೆಪಿ ಹೈಕಮಾಂಡ್ ಮಟ್ಟದ ನಾಯಕರು ಯಾವ ರೀತಿಯ ತೀರ್ಮಾನಕ್ಕೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಷ್ಟೆ.
0 comments:
Post a Comment