ಮೋದಿ ಪ್ರಧಾನಿಯಾದರೆ ಮನೆ ಬಿಡುತ್ತೇನೆ ಎಂದ ಗೌಡರು ಇದೀಗ ಮಗನನ್ನೇ ಮೋದಿ ಮನೆಗೆ ಕಳಿಸಿದ್ದಾರೆ : ವ್ಯಂಗ್ಯವಾಡಿದ ಡಿಸಿಎಂ
ಮಂಗಳೂರು, ಫೆಬ್ರವರಿ 18, 2024 (ಕರಾವಳಿ ಟೈಮ್ಸ್) : ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಜಾರಿಗೆ ತಂದ ಬ್ಯಾಂಕುಗಳ ರಾಷ್ಟ್ರೀಕರಣದ ಪ್ರಯುಕ್ತ ರಾಜ್ಯದಲ್ಲಿ ಮಾಜಿ ಕೇಂದ್ರ ವಿತ್ತ ಸಚಿವ ಬಿ ಜನಾರ್ದನ ಪೂಜಾರಿ ಅವರು ಹಮ್ಮಿಕೊಂಡ ಜನೋಪಯೋಗಿ ಸಾಲಮೇಳ ಕಾರ್ಯಕ್ರಮ ನನ್ನ ಪಾಲಿಗೆ ರಾಜಕೀಯ ಉನ್ನತಿಗೆ ಕಾರಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಭಿಮಾನ ವ್ಯಕ್ತಪಡಿಸಿದರು.
ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ಅಪರಾಹ್ನ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಾರ್ದನ ಪೂಜಾರಿ ಅವರು ಹಮ್ಮಿಕೊಂಡಿದ್ದ ಸಾಲಮೇಳ ಕಾರ್ಯಕ್ರಮವನ್ನು ಪೂಜಾರಿ ಅವರ ನೇತೃತ್ವದಲ್ಲಿ ನಮ್ಮ ಕ್ಷೇತ್ರದಲ್ಲೂ ನಾನು ಆಯೋಜಿಸುವ ಮೂಲಕ ಜನರಿಗೆ ಅದರ ಪ್ರಯೋಜನ ಆಗುವಂತೆ ಮಾಡಿದ್ದೆ. ಕಾಂಗ್ರೆಸ್ ಸರಕಾರದ ಈ ಜನಪರ ಕಾರ್ಯಕ್ರಮವೇ ಬಳಿಕ ನನ್ನ ಕ್ಷೇತ್ರದಲ್ಲಿ ನನ್ನನ್ನು ಸೋಲಿಲ್ಲದ ಸರದಾರನಾಗಿ ಮತದಾರರು ಕೈಹಿಡಿಯುವಂತೆ ಮಾಡಿದೆ ಎಂದರು.
ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಬದುಕು ಕಟ್ಟಿಕೊಂಡಿರುವ ರಾಜ್ಯದ ಮಹಿಳೆಯರು ಸಿದ್ದರಾಮಯ್ಯ ಹೆಸರಿನಲ್ಲಿ ದೇವಸ್ಥಾನಗಳಿಗೆ ತೆರಳಿ ಹರಕೆ ನೀಡುವಷ್ಟರ ಮಟ್ಟಿಗೆ ಜನಪರ ಹಾಗೂ ಬಡವರ ಪರ ಯೋಜನೆಗಳಿಂದ ಜನ ಸಂತುಷ್ಟರಾಗಿದ್ದಾರೆ ಎಂದ ಡಿಸಿಎಂ ಕರಾವಳಿ ಜಿಲ್ಲೆಗಳ ಜನ ವಿಧಾನಸಭಾ ಚುನಾವಣಾ ಸೋಲಿಗಾಗಿ ಯಾವತ್ತೂ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ರಾಜಕೀಯವಾಗಿ ತಿರುಗೇಟು ನೀಡುವ ಶಕ್ತಿ ಈ ಉಭಯ ಜಿಲ್ಲೆಗಳ ಜನರಲ್ಲಿ ಯಾವತ್ತೂ ಅಡಗಿದೆ ಜಿಲ್ಲೆಯ ಕೈ ನಾಯಕರಿಗೆ ವಿಶ್ವಾಸ ತುಂಬಿದರು.
ಮೋದಿ ಪ್ರಧಾನಿಯಾದರೆ ಮನೆ ಬಿಟ್ಟು ಹೋಗುತ್ತೇನೆ ಎಂದ ದೇವೇಗೌಡರು ಇಂದು ತನ್ನ ಮಗನನ್ನೇ ಮೋದಿ ಮನೆಗೆ ಕಳಿಸಿದ್ದಾರೆ ಎಂದು ವ್ಯಂಗ್ಯವಾಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ನಮ್ಮ ಸರಕಾರದ ಗ್ಯಾರಂಟಿಗಳು ಹಾಗೂ ಜನಪರ ಬಜೆಟ್ ಗಳೇ ಇದಕ್ಕೆ ಕಾರಣ. ರಾಜ್ಯದಲ್ಲಿ 5 ವರ್ಷ ಸುಭಿಕ್ಷೆಯ ಆಡಳಿತ ನಡೆಸಲಿರುವ ಕಾಂಗ್ರೆಸ್ ಮುಂದಿನ ಐದು ವರ್ಷಗಳೂ ಕೂಡಾ ಕಾಂಗ್ರೆಸ್ಸೇ ಸರಕಾರ ನಡೆಸಲಿದೆ ಎಂದರು.
0 comments:
Post a Comment