ಮೂಡಬಿದ್ರೆ, ಫೆಬ್ರವರಿ 17, 2024 (ಕರಾವಳಿ ಟೈಮ್ಸ್) : ಪಶು ಆಹಾರ ಉತ್ಪಾದನೆ ಹಾಗೂ ಮಾರಾಟ ಸಂಸ್ಥೆಯಲ್ಲಿ ಚಾಲಕ ಹುದ್ದೆಯಲ್ಲಿದ್ದ ವ್ಯಕ್ತಿಯ ಗುಣನಡತೆ ಹಾಗೂ ವ್ಯವಹಾರ ದೋಷಕ್ಕಾಗಿ ಕೆಲಸದಿಂದ ತೆಗೆದು ಹಾಕಿದ ದ್ವೇಷದಿಂದ ಪತ್ನಿ ಜೊತೆ ಸೇರಿ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಬಗ್ಗೆ ಮಹಿಳೆಯೋರ್ವರು ಮೂಡಬಿದ್ರೆ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.
ಮೂಡಬಿದ್ರೆ ರೇಂಜ್ ಫಾರೆಸ್ಟ್ ಕಚೇರಿ ಬಳಿ ನಿವಾಸಿ ಬಿ ಪುಂಡಲೀಕ ಪೈ ಅವರ ಪತ್ನಿ ಬಿ ಪದ್ಮಿನಿ ಪೈ (65) ಅವರೇ ಹಲ್ಲೆ ಹಾಗೂ ಜೀವಬೆದರಿಕೆಗೆ ಒಳಗಾಗಿರುವವರು. ಇವರ ಸಂಬಂಧಿಕರಾದ ಪ್ರಶಾಂತ್ ನಾಯಕ್ ಹಾಗೂ ಆತನ ಪತ್ನಿ ಪಾವನಿ ನಾಯಕ್ ಎಂಬವರೇ ಹಲ್ಲೆ ನಡೆಸಿದ ಆರೋಪಿಗಳು. ಈ ಬಗ್ಗೆ ಪದ್ಮಿನಿ ಪೈ ಅವರು ಪೊಲೀಸರಿಗೆ ದೂರು ನೀಡಿದ್ದು, ಫೆ 13 ರಂದು ಮಧ್ಯಾಹ್ನ ಸುಮಾರು 2.30 ರ ವೇಳೆಗೆ ನಾನು ಮನೆಯಲ್ಲಿ ಒಬ್ಬಳೆ ಇದ್ದಾಗ ಮನೆಗೆ ಅಕ್ರಮ ಪ್ರವೇಶಗೈದ ಆರೋಪಿಗಳಾದ ಪ್ರಶಾಂತ್ ನಾಯಕ್ ಹಾಗೂ ಅವರ ಪತ್ನಿ ಕೆಲಸದಿಂದ ತೆಗೆದು ಹಾಕಿದ ಬಗ್ಗೆ ಪ್ರಸ್ತಾಪಿಸಿ ಕೈಯಿಂದ ದೂಡಿ ಹಾಕಿ ಅವಾಚ್ಯವಾಗಿ ಬೈದು ಜೀವಬೆದರಿಕೆ ಒಡ್ಡಿರುತ್ತಾರೆ.
ನನ್ನ ಮಾಲಕತ್ವದ ಶ್ರೀ ಸುಧೀಂದ್ರ ಆಗ್ರೋ ಏಜೆನ್ಸೀಸ್ ಎಂಬ ಪಶು ಆಹಾರ ಉತ್ಪಾದನೆ ಮತ್ತು ಮಾರಾಟ ಮಳಿಗೆಯಲ್ಲಿ ಆರೋಪಿ ಪ್ರಶಾಂತ್ ನಾಯಕ ಚಾಲಕ ಹಾಗೂ ಇತರ ಕೆಲಸಗಳನ್ನು ನಿರ್ವಹಿಸಿಕೊಂಡಿದ್ದ. ಇತ್ತೀಚೆಗೆ ಆತನ ಗುಣನಡತೆ ಹಾಗೂ ವ್ಯವಹಾರ ಸರಿ ಇಲ್ಲದ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆ. ಆತನನ್ನು ಕೆಲಸದಿಂದ ತೆಗೆದ ಬಳಿಕ ಪ್ರತಿ ತಿಂಗಳು ಲೆಕ್ಕಾಚಾರ ಮಾಡುವಾಗ ಲೆಕ್ಕ ಸರಿ ಸಿಗದೆ ಇದ್ದುದರಿಂದ ಆತನನ್ನು ಬರಹೇಳಿದ್ದು, ಆತನ ಸ್ಪಂದಿಸದೆ ಕರೆ ಸ್ವೀಕರಿಸದೆ ಇದ್ದು, ಇತ್ತೀಚೆಗೆ ಅಂದರೆ ಫೆ 3 ರಂದು ದೇವಸ್ಥಾನದಲ್ಲಿ ಸಿಕ್ಕಿದ ವೇಳೆ ಸಂಸ್ಥೆಯ ಲೆಕ್ಕಾಚಾರ ಸರಿ ಇಲ್ಲ ಅದನ್ನು ಸರಿ ಮಾಡಿಕೊಡುವಂತೆ ಹೇಳಿದಾಗ ಏನೂ ಮಾತನಾಡದೆ ಅಲ್ಲಿಂದ ತೆರಳಿದ್ದ ಆರೋಪಿ ದಂಪತಿ ಬಳಿಕ ಇದೇ ಪೂರ್ವದ್ವೇಷದಿಂದ ಈ ಕೃತ್ಯ ಎಸಗಿದ್ದಾರೆ ಎಂದು ನೀಡಿದ ದೂರಿನಂತೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment