ಮಂಗಳೂರು-ಉಡುಪಿ ಗೆಲ್ಲಲೇಬೇಕೆಂಬ ಡಿಕೆಶಿ ಸಲಹೆ ಮೇರೆಗೆ ಮಂಗಳೂರಿನಿಂದಲೇ ಚುನಾವಣಾ ರಹಣಕಹಳೆ ಆರಂಭಿಸಿದ್ದೇವೆ : ಸಿಎಂ ಸಿದ್ದರಾಮಯ್ಯ - Karavali Times ಮಂಗಳೂರು-ಉಡುಪಿ ಗೆಲ್ಲಲೇಬೇಕೆಂಬ ಡಿಕೆಶಿ ಸಲಹೆ ಮೇರೆಗೆ ಮಂಗಳೂರಿನಿಂದಲೇ ಚುನಾವಣಾ ರಹಣಕಹಳೆ ಆರಂಭಿಸಿದ್ದೇವೆ : ಸಿಎಂ ಸಿದ್ದರಾಮಯ್ಯ - Karavali Times

728x90

18 February 2024

ಮಂಗಳೂರು-ಉಡುಪಿ ಗೆಲ್ಲಲೇಬೇಕೆಂಬ ಡಿಕೆಶಿ ಸಲಹೆ ಮೇರೆಗೆ ಮಂಗಳೂರಿನಿಂದಲೇ ಚುನಾವಣಾ ರಹಣಕಹಳೆ ಆರಂಭಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

 ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿಯೂ ರಾಜ್ಯ ಸುಭಕ್ಷವಾಗಿದೆ, ಗ್ಯಾರಂಟಿ ಯೋಜನೆ ಟೀಕಿಸಿದ ಮೋದಿ ಇದೀಗ ‘ಗ್ಯಾರಂಟಿ’ ಪದವನ್ನೇ ಕದ್ದು ಬಿಟ್ಟಿದ್ದಾರೆ


ಮಂಗಳೂರು, ಫೆಬ್ರವರಿ 18, 2024 (ಕರಾವಳಿ ಟೈಮ್ಸ್) : ಮಂಗಳೂರು ಹಾಗೂ ಉಡುಪಿ ಕ್ಷೇತ್ರಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕೆಂಬ ಡಿಕೆಶಿ ಸಲಹೆ ಮೇರೆಗೆ ಮಂಗಳೂರಿನಿಂದಲೇ ಲೋಕಸಭಾ ಚುನಾವಣಾ ರಣಕಹಳೆ ಆರಂಭಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ಅಪರಾಹ್ನ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರನ್ನು ಎಂದಿಗೂ ನಂಬಬೇಡಿ, ನುಡಿದಂತೆ ನಡೆಯುವ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ಮೋದಿ ಅವರ 10 ವರ್ಷಗಳ ಭರವಸೆಗಳ ಪಟ್ಟಿ ನೋಡಿ ಪರಾಮರ್ಶಿಸಿ ಎಂದು ರಾಜ್ಯದ ಜನರಿಗೆ ಸಲಹೆ ನೀಡಿದರು. 

ಮೋದಿ ಹಾಗೂ ಬಿಜೆಪಿಗರದ್ದು ಕೋಮುವಾದಿ ಮಾತ್ರ ಸಾಧನೆ. ಧರ್ಮಗಳ ನಡುವೆ ದ್ವೇಷವನ್ನು ಮಾತ್ರ ಉಂಟು ಮಾಡಿ ತಮ್ಮ ರಾಜಕೀಯ ಏಳಿಗೆಯನ್ನು ಬಯಸುತ್ತಿದ್ದಾರೆ ಎಂದ ಸಿಎಂ ನಾವು ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ಕಳೆದ ಸರಕಾರದಲ್ಲಿ ನಾವು ಸಾಕಷ್ಟು ಕೆಲಸ ಮಾಡಿಯೂ ಸೋತಿದ್ದೆವು. ನಮ್ಮ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದನ್ನು ಜನರಿಗೆ ಮನವರಿಕೆ ಮಾಡುವಲ್ಲಿ ನಾವು ವಿಫಲರಾಗಿ ಸೋತಿದ್ದೇವೆ. ಆದರೆ ಇನ್ನು ಮುಂದಕ್ಕೆ ಹಾಗಾಗಬಾರದು ಎಂದ ಸಿದ್ದರಾಮಯ್ಯ ಅವರು, ಬಿಜೆಪಿ ಕಳೆದ ಬಾರಿ ಜನರಿಗೆ ನೀಡಿದ 600 ಭರವಸೆಗಳ ಪೈಕಿ 60ನ್ನು ಕೂಡಾ ಈಡೇರಿಸಿಲ್ಲ. ನಾವು ಅಧಿಕಾರಕ್ಕೆ ಬಂದು ಕೇವಲ 8 ತಿಂಗಳಲ್ಲಿ ಗ್ಯಾರಂಟಿ ಈಡೇರಿಸಿದ್ದೇವೆ. ಜನರಿಗೆ ನೀಡಿದ ಭರವಸೆಗಳನ್ನು ಕನಿಷ್ಠ ಅವಧಿಯಲ್ಲಿ ಈಡೇರಿಸಿದ ಪಕ್ಷ ಇದ್ದರೆ ಕಾಂಗ್ರೆಸ್ ಮಾತ್ರ ಎಂದು ಎದೆ ತಟ್ಟಿದರು. 

ನಾವು ಜನತೆಗೆ ಭರವಸೆ ನೀಡಿದ ಐದೂ ಗ್ಯಾರಂಟಿಗಳನ್ನು ಈಡೇರಿಸಿಯೂ ಯಾವುದೇ ದಿವಾಳಿಯಾಗಿಲ್ಲ. ರಾಜ್ಯ ಇನ್ನೂ ಕೂಡಾ ಸುಭಿಕ್ಷವಾಗಿದೆ. ಆದರೆ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿಗಳನ್ನು ಟೀಕಿಸಿ, ಅವಹೇಳಿಸಿದ ಮೋದಿ ಅವರು ಇದೀಗ ನಮ್ಮ ‘ಗ್ಯಾರಂಟಿ’ ಎಂಬ ಪದವನ್ನೇ ಕದ್ದುಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ ಅವರು, ಸ್ವತಂತ್ರ ಭಾರತದಲ್ಲಿ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿಯನ್ನು ನನ್ನ ರಾಜಕೀಯ ಇತಿಹಾಸದಲ್ಲಿ ಕಂಡಿಲ್ಲ. ಕೇಳಿಲ್ಲ ಎಂದು ಕುಹಕವಾಡಿದರು. 

ನಮ್ಮ ಸರಕಾರದ ಬಜೆಟಿನಲ್ಲಿ 52 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಮೀಸಲಿಡಲಾಗಿದೆ. ಬಜೆಟ್ ಸತ್ಯ ತಡೆದುಕೊಳ್ಳಲಾರದೆ ಅಧಿವೇಶನವನ್ನೇ ಬಹಿಷ್ಕರಿಸಿ ರಾಜ್ಯದಲ್ಲಿ ಕರಾಳ ಇತಿಹಾಸ ಸೃಷ್ಟಿಸಿದ ಬಿಜೆಪಿಗರು ಈ ರಾಜ್ಯದ ಜನರ ಹಿತವನ್ನು ಅದೇಗೆ ಕಾಪಾಡುತ್ತಾರೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಮೋದಿ ರಾಜ್ಯಕ್ಕೆ ವಂಚನೆ ಮಾಡುತ್ತಿದ್ದರೂ ರಾಜ್ಯದ 25 ಎಂಪಿಗಳು ಬಾಯಿ ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದರು. ಇದೀಗ ಕನ್ನಡಿಗೆ ಸ್ವಾಭಿಮಾನದ ಪ್ರಶ್ನೆ ಎದುರಾಗಿದೆ. ಈ ಬಾರಿ ಬಿಜೆಪಿ ಎಂಪಿಗಳನ್ನು ಸೋಲಿಸಲೇಬೇಕು. ಕಾಂಗ್ರೆಸ್ಸಿನ ಎಂಪಿ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕು ಎಂದು ಜನತೆಗೆ ಕರೆ ನೀಡಿದರು. 

ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಾತನಾಡುವ ಮೋದಿ ಪಕ್ಷದ ನಾಯಕರು ಮಾತ್ರ ಟೊಪ್ಪಿ ಹಾಕಿದವರು, ಬುರ್ಖಾ ಹಾಕಿದವರು ಕಚೇರಿಗೆ ಬರಬೇಡಿ ಎಂದು ಹೇಳುವ ಮೂಲಕ ಜನರನ್ನು ವಿಭಜಿಸುತ್ತಿದ್ದಾರೆ. ಬಿಜೆಪಿ ಯಾವತ್ತೂ ಬಡವರ ಪರ ಪಕ್ಷವಲ್ಲ ಅವರದೇನಿದ್ದರೂ ಕಾರ್ಪೊರೇಟರ್ ಗಳ ಪರವಾದ ಪಕ್ಷ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು-ಉಡುಪಿ ಗೆಲ್ಲಲೇಬೇಕೆಂಬ ಡಿಕೆಶಿ ಸಲಹೆ ಮೇರೆಗೆ ಮಂಗಳೂರಿನಿಂದಲೇ ಚುನಾವಣಾ ರಹಣಕಹಳೆ ಆರಂಭಿಸಿದ್ದೇವೆ : ಸಿಎಂ ಸಿದ್ದರಾಮಯ್ಯ Rating: 5 Reviewed By: karavali Times
Scroll to Top