ನಮ್ಮ ಸರಕಾರದಲ್ಲಿ ಅಧಿಕಾರಿಗಳು ಜಾತ್ಯಾತೀತತೆ ಹಾಗೂ ಸಂವಿಧಾನಕ್ಕೆ ಬದ್ದರಾಗಿ ಕಾರ್ಯನಿರ್ವಹಿಸಬೇಕು : ಜಿಲ್ಲಾ ಉಸ್ತವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ - Karavali Times ನಮ್ಮ ಸರಕಾರದಲ್ಲಿ ಅಧಿಕಾರಿಗಳು ಜಾತ್ಯಾತೀತತೆ ಹಾಗೂ ಸಂವಿಧಾನಕ್ಕೆ ಬದ್ದರಾಗಿ ಕಾರ್ಯನಿರ್ವಹಿಸಬೇಕು : ಜಿಲ್ಲಾ ಉಸ್ತವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ - Karavali Times

728x90

1 February 2024

ನಮ್ಮ ಸರಕಾರದಲ್ಲಿ ಅಧಿಕಾರಿಗಳು ಜಾತ್ಯಾತೀತತೆ ಹಾಗೂ ಸಂವಿಧಾನಕ್ಕೆ ಬದ್ದರಾಗಿ ಕಾರ್ಯನಿರ್ವಹಿಸಬೇಕು : ಜಿಲ್ಲಾ ಉಸ್ತವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಬೆಂಗಳೂರು, ಫೆಬ್ರವರಿ 01, 2024 (ಕರಾವಳಿ ಟೈಮ್ಸ್) : ನಮ್ಮ ಸರಕಾರದಲ್ಲಿ ಅಧಿಕಾರಿಗಳು ಜಾತ್ಯತೀತತೆ ಮತ್ತು ಸಂವಿಧಾನಕ್ಕೆ ಬದ್ಧರಾಗಿರಬೇಕು. ಇಲ್ಲದಿದ್ದರೆ ಅಂಥವರಿಗೆ ಇಲ್ಲಿ ಮುಂದುವರೆಯಲು ಅವಕಾಶ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. 

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆ ನೀಡಿದ ಅವರು, ನಮ್ಮ ಸರಕಾರ ಬಂದು 8 ತಿಂಗಳುಗಳಾಗಿದೆ. ಡಿಸಿ, ಸಿಇಒ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿ 3-4 ತಿಂಗಳುಗಳಾಗಿವೆ. ನಿಮ್ಮ ಅನುಭವ ಜಿಲ್ಲಾಡಳಿತಕ್ಕೆ ನೆರವಾಗಬೇಕು. ಸರಕಾರದ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷಿಪ್ರ ತೀರ್ಮಾನ ತೆಗೆದುಕೊಳ್ಳಲು ನೆರವಾಗಬೇಕು ಎನ್ನುವ ಕಾರಣಕ್ಕೆ ನಿಮ್ಮನ್ನು ನೇಮಿಸಲಾಗಿದೆ. ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ ಎನ್ನುವ ಮಾಹಿತಿಗಳನ್ನು ಸಭೆಗೆ ನೀಡಬೇಕು ಎಂದು ತಾಕೀತು ಮಾಡಿದರು. 

ನಮ್ಮ ಗ್ಯಾರಂಟಿ ಯೋಜನೆಗಳು ಬಹುಪಾಲು ಜನರಿಗೆ ತಲುಪಿದೆ. ತಾಂತ್ರಿಕ ಅಡಚಣೆಗಳಿಂದಾಗಿ ಕೆಲವರಿಗೆ ತಲುಪಿಲ್ಲ. ಇದನ್ನೆ ದೊಡ್ಡ ಲೋಪವೆಂಬಂತೆ ಕೆಲವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಮೌನವಾಗಿದ್ದಾರೆ. ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಯಾಕಿನ್ನೂ ಆಗಿಲ್ಲ. ಮೊದಲು ಆ ಸಮಸ್ಯೆಯನ್ನು ಪರಿಹರಿಸಿ. ಅನರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಿ ಅವರ ಅರ್ಜಿ ತಿರಸ್ಕರಿಸಿ ಎಂದ ಸಿಎಂ  ಸಾರ್ವಜನಿಕರು ರೆವಿನ್ಯೂ ಇಲಾಖೆ, ತಹಶೀಲ್ದಾರ್ ಮತ್ತು ಎಸಿ ಹಾಗೂ ಡಿಸಿ ಕಚೇರಿಗಳಿಗೆ ಅಲೆದಾಟ ಕಡಿಮೆ ಆಗಿದೆಯಾ? ತಹಶೀಲ್ದಾರ್, ಎಸಿ, ಡಿಸಿ ಕಚೇರಿಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗ್ತಾ ಇದೆಯಾ? ಜನರ ಅರ್ಜಿಗಳು ಎಷ್ಟು ದಿನಗಳಿಂದ ಬಾಕಿ ಇವೆ ಪರಿಶೀಲನೆ ನಡೆಸಿದ್ದೀರಾ? ಎಷ್ಟು ಬಾಕಿ ಅರ್ಜಿ ನಿಮ್ಮಿಂದ ಬಗೆಹರಿದಿದೆ? ಎಷ್ಟು ಆಸ್ಪತ್ರೆಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಿ? ಡಯಾಲಿಸಿಸ್ ಕೇಂದ್ರಗಳಲ್ಲಿ ಸಮರ್ಪಕ ಸೇವೆ ಜನರಿಗೆ ಸಿಗುತ್ತಿದೆಯಾ? ಜನ ಹೆಚ್ಚು ಹೋಗೋದು ಕೃಷಿ, ಕಂದಾಯ, ಪೆÇಲೀಸ್ ಠಾಣೆಗಳಿಗೆ. ನೀವು ಎಷ್ಟು ಠಾಣೆಗಳಿಗೆ ಭೇಟಿ ನೀಡಿದ್ದೀರಿ?

ಎಷ್ಟು ಕಚೇರಿ, ಹಾಸ್ಟೆಲ್, ಠಾಣೆ, ಶಾಲೆಗಳಿಗೆ ಭೇಟಿ ನೀಡಿದ್ದೀರಿ? ಕೋಲಾರದ ಹಾಸ್ಟೆಲ್ ನಲ್ಲಿ ಊಟದಲ್ಲಿ ಆದ ಸಮಸ್ಯೆಗೆ ಯಾರು ಹೊಣೆ? ಸಮಸ್ಯೆ ಯಾಕಾಯ್ತು? ಮೊದಲೇ ಅಧಿಕಾರಿಗಳು ಈ ಬಗ್ಗೆ ನಿಗಾ ಇಡಬೇಕಿತ್ತು. ನಿಗಾ ವಹಿಸದ ಕಾರಣಕ್ಕೆ ಈ ರೀತಿಯ ಘಟನೆಗಳು ಸಂಭವಿಸುತ್ತದೆ. ಇಂತಹವು ಮರುಕಳಿಸಿದರೆ ಸೂಕ್ತ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. 

ಜನಸ್ಪಂದನದಲ್ಲಿ ಬಂದ ಸಮಸ್ಯೆಗಳಿಗೆ ಸಮರೋಪಾದಿಯಲ್ಲಿ ಪರಿಹಾರ ಒದಗಿಸಿಕೊಡಿ ಎನ್ನುವ ಸೂಚನೆ ನೀಡಿದ್ದೆ. ಸದ್ಯ ಸಮಾಧಾನಕರವಾಗಿ ಕೆಲಸ ಮಾಡಿದ್ದೀರಿ. ಇದರ ಪ್ರಮಾಣ ಮತ್ತು ವೇಗವನ್ನು ಇನ್ನಷ್ಟು ಹೆಚ್ಚಿಸಬೇಕು. ನೀವು ಉಸ್ತುವಾರಿ ವಹಿಸಿರುವ ಜಿಲ್ಲೆಯಲ್ಲಿನ ಅಧಿಕಾರಿಗಳು-ಫಲಾನುಭವಿಗಳ ಜತೆ ಸಂಪರ್ಕ, ಸಂಬಂಧ ಇನ್ನಷ್ಟು ಹೆಚ್ಚು ಹೆಚ್ಚು ಏರ್ಪಡಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಜಾತ್ಯತೀತತೆ ಬಗ್ಗೆ ಕಮಿಟ್‍ಮೆಂಟ್ ಇರಬೇಕು. ಸಂವಿಧಾನದ ಬಗ್ಗೆ ಗೌರವ ಇರಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಂತಹ ಅಧಿಕಾರಿಗಳಿಗೆ ಇಲ್ಲಿ ಮುಂದುವರೆಯುವ ಹಕ್ಕಿಲ್ಲ, ಅವಕಾಶವೂ ಇಲ್ಲ ಎಂದು ತಾಕೀತು ಮಾಡಿದರು. 

ನಿಮ್ಮ ಲೆವೆಲ್ ನಲ್ಲಿ ಸಮಸ್ಯೆ ಬಗೆಹರಿಯದೆ ಹೋದರೆ, ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು. ಕರ್ತವ್ಯಲೋಪ, ನಿರ್ಲಕ್ಷ್ಯಕ್ಕೆ ಜಿಲ್ಲಾ ಮಟ್ಟದಲ್ಲಿ ನೀವು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೇ ಹೋದರೆ ಜಿಲ್ಲಾ ಮಟ್ಟದಲ್ಲಿ ಶಿಸ್ತು ತರಲು ಸಾಧ್ಯವಿಲ್ಲ. ಪ್ರತಿ ಜಿಲ್ಲೆಯ ಪ್ರಗತಿ ಪರಿಶೀಲನೆಯನ್ನು ಸವಿವರವಾಗಿ ಮಾಡಬೇಕು. ಅದರಿಂದ ಜಿಲ್ಲೆಯ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು. 

ಆಯಾ ಜಿಲ್ಲೆಯ ರಸ್ತೆ ಸಾರಿಗೆ ನಿಗಮದ ಡಿಸಿಗಳೊಂದಿಗೆ ಸಭೆ ನಡೆಸಿ, ಬಸ್ ಗಳ ಕೊರತೆ, ಸ್ಥಗಿತಗೊಳಿಸಿರುವ ಮಾರ್ಗಗಳು, ಬಸ್ ಸೇವೆಯಲ್ಲಿನ ವ್ಯತ್ಯಯ ಮೊದಲಾದ ವಿಷಯಗಳ ಕುರಿತು ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು. ವನ್ಯ ಪ್ರಾಣಿಗಳು ರೈತರ ಜಮೀನಿಗೆ, ತೋಟಕ್ಕೆ ನುಗ್ಗಲು ಆಹಾರ, ನೀರಿನ ಕೊರತೆಯೇ ಕಾರಣ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅರಣ್ಯದೊಳಗೆಯೇ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. 

ಮೇವು ಸಾಲದೆ ಇದ್ದರೆ, ಬೆಳೆಯಬೇಕು. ರೈತರಿಂದ ಕೊಂಡುಕೊಳ್ಳಬೇಕು. ಮೇವಿಗೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು. 20 ಕೋಟಿ ರೂಪಾಯಿ ಮೇವು ಮಿನಿ ಕಿಟ್ ವಿತರಣೆ ಕುರಿತು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು. ಮೇವಿನ ಲಭ್ಯತೆಯನ್ನು ವಾಸ್ತವಾಂಶವನ್ನು ಆಧರಿಸಿ ಲೆಕ್ಕಾಚಾರ ಹಾಕಬೇಕು. ಮುಂದೆ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸಮಸ್ಯೆ ಎದುರಾಗಬಹುದು. ಇದಕ್ಕೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ರೇಷ್ಮೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯ ಫಾರಂಗಳಲ್ಲಿ ಮೇವು ಬೆಳೆಯಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು, ಮೇವಿಗಾಗಿ ಜನರು ಗುಳೆ ಹೋಗದಂತೆ ನೋಡಿಕೊಳ್ಳುವುದು ಹಾಗೂ ಇನ್‍ಪುಟ್ ಸಬ್ಸಿಡಿ ವಿತರಣೆ ಈ ನಾಲ್ಕು ಅಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. 

ಪ್ರತಿಯೊಬ್ಬ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಡೈರಿ ಇಟ್ಟುಕೊಳ್ಳಬೇಕು. ತಮ್ಮ ಕೆಲಸ -ಕಾರ್ಯಗಳ ವಿವರ ಆ  ಡೈರಿಯಲ್ಲಿರಬೇಕು. ತಿಂಗಳಿಗೆ ಕನಿಷ್ಠ ಎರಡು ಬಾರಿಯಾದರೂ ತಮ್ಮ ತಮ್ಮ ಉಸ್ತುವಾರಿಯ ಜಿಲ್ಲೆಗಳಿಗೆ ಭೇಟಿ ನೀಡುವುದು ಕಡ್ಡಾಯ ಮಾಡಿಕೊಳ್ಳಬೇಕು. ಮುಂದಿನ ತಿಂಗಳುಗಳಲ್ಲಿ ಬರಗಾಲ ತೀವ್ರವಾಗುವ ಸಾಧ್ಯತೆ ಇದೆ. ಆಗ ಬರಗಾಲದ ಸಮಸ್ಯೆ ಜನರಿಗೆ ತಟ್ಟದಂತೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳದ್ದಾಗಿರುತ್ತದೆ ಎಂದು ತಾಕೀತು ಮಾಡಿದ ಸಿಎಂ ಅವರು, ಪ್ರತಿಯೊಬ್ಬರಿಗೂ ಕುಡಿಯುವ ನೀರು, ಉದ್ಯೋಗ, ಮೇವು ಲಭ್ಯತೆ ಖಾತರಿಪಡಿಸಬೇಕು. ಒಂದು ವಾರದೊಳಗೆ ಇನ್‍ಪುಟ್ ಸಬ್ಸಿಡಿ ಪಾವತಿ ಪೂರ್ಣಗೊಳಿಸಬೇಕು ಎಂದರು. 

ಫೆಬ್ರವರಿ 8 ರಂದು ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಜನಸ್ಪಂದನ ಕಾರ್ಯಕ್ರಮದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಸಿಎಂ ಸಿದ್ದರಾಮಯ್ಯ ಇಲಾಖಾವಾರು ಮಳಿಗೆಗಳನ್ನು ಸ್ಥಾಪಿಸಲಾಗುವುದು. ಆಯಾ ಇಲಾಖೆಯ ಕಾರ್ಯದರ್ಶಿಗಳು ಮುಂಚಿತವಾಗಿಯೇ ಆಗಮಿಸಿ, ಅರ್ಜಿಗಳ ಪರಿಶೀಲನೆ ನಡೆಸಿ, ಪರಿಹಾರ ಕ್ರಮಗಳ ಕುರಿತು ಚರ್ಚಿಸಿ ಸಿದ್ಧತೆ ನಡೆಸಬೇಕು ಎಂದ ಸಿಎಂ ನಾನು ಆಯಾ ಇಲಾಖೆಯ ಮಳಿಗೆಗೆ ಭೇಟಿ ನೀಡಿದಾಗ ಈ ಅರ್ಜಿಗಳನ್ನು ನನ್ನ ಅವಗಾಹನೆಗೆ ತಂದು, ಕ್ರಮ ವಹಿಸಬೇಕು ಎಂದರು. 

ಅಧಿವೇಶನದಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರ ಒದಗಿಸಲೇಬೇಕು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಸಮಯ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಉತ್ತರ ನೀಡದಿರುವುದು, ಸಮಯ ತೆಗೆದುಕೊಳ್ಳುವುದು ಮಾಡಬಾರದು. ಅಧಿವೇಶನದ ಸಂದರ್ಭದಲ್ಲಿ ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಿರಬೇಕು. ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಸರಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬ ಖಾತ್ರಿ ಜನರಲ್ಲಿ ಮೂಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮ್ಯ ಕಾರ್ಯದರ್ಶಿಗಳಿಗೆ ಕಿವಿ ಮಾತು ಹೇಳಿದರು. 

  • Blogger Comments
  • Facebook Comments

0 comments:

Post a Comment

Item Reviewed: ನಮ್ಮ ಸರಕಾರದಲ್ಲಿ ಅಧಿಕಾರಿಗಳು ಜಾತ್ಯಾತೀತತೆ ಹಾಗೂ ಸಂವಿಧಾನಕ್ಕೆ ಬದ್ದರಾಗಿ ಕಾರ್ಯನಿರ್ವಹಿಸಬೇಕು : ಜಿಲ್ಲಾ ಉಸ್ತವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ Rating: 5 Reviewed By: karavali Times
Scroll to Top