ಬಿಜೆಪಿಗೆ ಸಂಸದೀಯ, ಪ್ರಜಾಫ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರ ತಲೆ ತುಂಬ ರಾಜಕೀಯ ಮಂಜು ತುಂಬಿದೆ : ಸಿಎಂ ಸಿದ್ದರಾಮಯ್ಯ - Karavali Times ಬಿಜೆಪಿಗೆ ಸಂಸದೀಯ, ಪ್ರಜಾಫ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರ ತಲೆ ತುಂಬ ರಾಜಕೀಯ ಮಂಜು ತುಂಬಿದೆ : ಸಿಎಂ ಸಿದ್ದರಾಮಯ್ಯ - Karavali Times

728x90

16 February 2024

ಬಿಜೆಪಿಗೆ ಸಂಸದೀಯ, ಪ್ರಜಾಫ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರ ತಲೆ ತುಂಬ ರಾಜಕೀಯ ಮಂಜು ತುಂಬಿದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 16, 2024 (ಕರಾವಳಿ ಟೈಮ್ಸ್) : ರಾಜ್ಯದ ಬಡವರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ವರ್ಗದವರು, ಅಲ್ಪಸಂಖ್ಯಾತರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚು ಮಾಡುವ ಪ್ರಯತ್ನ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ಪ್ರಯತ್ನವೂ ಬಜೆಟಿನಲ್ಲಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

2024-25ನೇ ಸಾಲಿನ ಆಯವ್ಯಯ ಮಂಡಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಸಮಸ್ಯೆಗಳಿಂದ ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ. ಬಡವರ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಲು ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ನಾವು ಅಧಿಕಾರಕ್ಕೆ ಬಂದು 9 ತಿಂಗಳಾಗುವ ಮೊದಲೇ ಜನತೆಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಇದರೊಂದಿಗೆ ಕೃಷಿ, ನೀರಾವರಿ, ಲೋಕೋಪಯೋಗಿ, ಇಂಧನ, ಗ್ರಾಮೀಣಾಭಿವೃದ್ಧಿ, ಬರಗಾಲ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಹಾಗೂ ಅಭಿವೃದ್ಧಿಗೆ ಹಣ ಕೊಡುವ ಕೆಲಸವನ್ನೂ ಮಾಡಲಾಗಿದೆ ಎಂದರು. 

2024-25ನೇ ಸಾಲಿಗೆ 3,71,383 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಾಗಿದೆ. ಕಳೆದ ವರ್ಷದ ಬಜೆಟ್ ಗಾತ್ರ 3,27,747 ಕೋಟಿ ರೂಪಾಯಿ ಇತ್ತು. ಕಳೆದ ಬಜೆಟಿಗಿಂತ 46,636 ಕೋಟಿ ರೂಪಾಯಿ ಗಾತ್ರ ಹೆಚ್ಚಾಗಿದೆ.  ಜುಲೈನಲ್ಲಿ ಮಂಡಿಸಿದ ಬಜೆಟ್ ಗಾತ್ರಕ್ಕಿಂತ ಬೆಳವಣಿಗೆಯಲ್ಲಿ ಶೇ.13 ರಷ್ಟು ಬೆಳವಣಿಗೆಯಾಗಿದೆ ಎಂದು ಸಿಎಂ ಸಿದ್ದು ಈ ವರ್ಷ 36,000 ಕೋಟಿ ರೂಪಾಯಿ ಗ್ಯಾರಂಟಿಗಳಿಗೆ ಕೊಟ್ಟಿದ್ದರೂ ಕೂಡ ಅಭಿವೃದ್ಧಿಗೂ ಅನುದಾನವನ್ನು  ಮೀಸಲಿರಿಸಿದ್ದೇವೆ. 240 ತಾಲ್ಲೂಕುಗಳಲ್ಲಿ 223 ತಾಲೂಕುಗಳು ಬರಪೀಡಿತವಾಗಿದ್ದು, ಸುಮಾರು 35,000 ಕೋಟಿ ರೂಪಾಯಿ ಕೃಷಿ ಉತ್ಪಾದನೆಯಲ್ಲಿ ನಷ್ಟವಾಗಿದೆ. 18,171 ಕೋಟಿ ರೂಪಾಯಿಗಳನ್ನು ಎನ್‍ಡಿಆರ್‍ಎಫ್ ಮಾರ್ಗಸೂಚಿಗಳ ಪ್ರಕಾರ ಬರಪರಿಹಾರವನ್ನು ಕೇಂದ್ರ ಸರಕಾರದಿಂದ  ಕೋರಲಾಗಿದೆ. ಎನ್.ಡಿ.ಆರ್.ಎಫ್ ಅನುದಾನ ನಿಗದಿ ಮಾಡುವುದು ಹಣಕಾಸು ಆಯೋಗದವರು. ಅದು ರಾಜ್ಯದಿಂದ ಸಂಗ್ರಹಿಸಿರುವ ಹಣ. ಕೇಂದ್ರ ಸರಕಾರದ ಅನುದಾನವಲ್ಲ. ಐದು ತಿಂಗಳಾದರೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ, ಸಭೆಯನ್ನೂ ಕರೆದಿಲ್ಲ ಎಂದು ಆರೋಪಿಸಿದರು. 

ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಬಜೆಟ್ ಓದಲು ಪ್ರಾರಂಭ ಮಾಡಿದ ಕೂಡಲೇ ಸುನೀಲ್ ಕುಮಾರ್ ಅವರು ಏನಿಲ್ಲ ಏನಿಲ್ಲ ಎಂದು ಘೋಷಣೆ ಕೂಗುತ್ತಿದ್ದರು. ಬಿಜೆಪಿಗೆ ಸಂಸದೀಯ, ಪ್ರಜಾಫ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರ ತಲೆ ತುಂಬ ರಾಜಕೀಯ ಮಂಜು ತುಂಬಿದೆ. ಕಾಮಾಲೆ ರೋಗಿಗಳಿಗೆ ಕಂಡಿದ್ದೆಲ್ಲಾ ಹಳದಿಯಂತೆ ಆಗಿದೆ. ರಾಜಕೀಯ ಹೇಳಿಕೆ ಬೇಡ ಎನ್ನುವುದಿಲ್ಲ. ಆದರೆ ಟೀಕೆಗಳು ಆರೋಗ್ಯಕರವಾಗಿರಬೇಕು. ಪ್ರಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡುತ್ತಾರೆ. ಪ್ಲಕಾರ್ಡ್ ಹಿಡಿದಿದ್ದರು. ಬಜೆಟ್ ಕೇಳಬಾರದು ಎಂದು ಯೋಚಿಸಿಕೊಂಡೇ ಬಂದಿದ್ದರು. ನಾನು ವಸ್ತುಸ್ಥಿತಿಯನ್ನು ಹೇಳಿದರೆ ಅವರಿಗೆ ಅದು ನುಂಗಲಾರದ ತುತ್ತು. ಸತ್ಯ ಹೇಳಿದರೆ ತಡೆದುಕೊಳ್ಳಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯವನ್ನು  ಜನರಿಗೆ ಹೇಳುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಅವರು ಕೂಡ ಕೋಲೆಬಸವನ ಹಾಗೆ ತಲೆ ಅಲ್ಲಾಡಿಸದೇ ಕೇಂದ್ರದವರನ್ನು ಕೇಳಬೇಕಿತ್ತು. ಕೋಲಾರ ಸಂಸದರಾದ ಮುನಿಸ್ವಾಮಿಯವರು ಸಂಸತ್ತಿನಲ್ಲಿ ಒಂದು ದಿನವೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಬಾಯಿ ಬಿಡಲಿಲ್ಲ. ಐದು ವರ್ಷದಲ್ಲಿ ಒಂದು ಬಾರಿಯಾದರೂ ಮಾತನಾಡಿದ್ದಾರಾ? ಅವರು ಸಂಸದರಾಗಲು ಲಾಯಕ್ಕೇ? ಎಂದು ಪ್ರಶ್ನಿಸಿದ ಸಿಎಂ ಕೇಂದ್ರ ಸರ್ಕಾರದಿಂದ ನ್ಯಾಯಯುತವಾದದ್ದು ಕೇಳಲು ಇವರಿಗೆ ಸಾಧ್ಯವಿಲ್ಲ ಎಂದರೇ ಏನು ಸೂಚಿಸುತ್ತದೆ.  ನಾನು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ಕೇಂದ್ರದ ಅನುದಾನವನ್ನು ಪಡೆಯಿರಿ ಎಂದು ಒತ್ತಾಯಿಸಿದ್ದೆ. 15ನೇ ಹಣಕಾಸು ಆಯೋಗದವರು ಶಿಫಾರಸು ಮಾಡಿದ್ದ 5,495 ಕೋಟಿ ರೂಪಾಯಿ ವಿಶೇಷ ಅನುದಾನ ಪಡೆಯಲು ಹೇಳಿದ್ದೆ. ಬೆಂಗಳೂರು ಅಭಿವೃದ್ಧಿಗೆ 6,000 ಕೋಟಿ ಕೊಟ್ಟಿದ್ದಾರೆ. ಅದನ್ನು ಪಡೆಯಿರಿ ಎಂದು ಹೇಳಿದ್ದೆ. ಒಟ್ಟು  11,495 ಕೋಟಿ ರೂಪಾಯಿ ಶಿಫಾರಸ್ಸು ಮಾಡಿರುವುದನ್ನು ಒತ್ತಾಯ ಮಾಡಿ ಎಂದು ಅವರಿಗೆ ಆಗ್ರಹಿಸಿದ್ದೆ ಎಂದ ಸಿಎಂ ಸಿದ್ದರಾಮಯ್ಯ ಕನ್ನಡಿಗರಿಗೆ ಅನ್ಯಾಯವಾದರೂ ಸುಮ್ಮನಿರಬೇಕೇ? ಭದ್ರಾ ಮೇಲ್ದಂಡೆಗೆ 2023-24 ಕೇಂದ್ರ ಬಜೆಟಿನಲ್ಲಿ 5,300 ಕೋಟಿ ರೂಪಾಯಿ ಕೊಡುತ್ತೇವೆ ಎಂದಿದ್ದರು. ಅದನ್ನೇ ಇಲ್ಲಿನ ಬಜೆಟಿನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿ ನರೇಂದ್ರ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ರಾಷ್ಟ್ರೀಯ ಯೋಜನೆಯಾಗಲಿದೆ ಎಂದು ಹೇಳಿದವರು ಇವರೇ. ಆದರೆ ಇನ್ನೂ ಆಗಿಲ್ಲವೆಂದರೆ ಅವರಿಗೆ ಕೋಪ ಏಕೆ? ಇದು ಕನ್ನಡ ಜನರಿಗೆ ಮಾಡುತ್ತಿರುವ ದ್ರೋಹ. ಇದು ಪ್ರಜಾಪ್ರಭುತ್ವದ ವಿರೋಧವಲ್ಲವೇ? ಎಂದು ಪ್ರಶ್ನಿಸಿದರು. 

ನಾನು ಈ ವರ್ಷ ಗ್ಯಾರಂಟಿಗಳಿಗೆ 36,000 ಕೋಟಿ ರೂಪಾಯಿ ಕೊಟ್ಟಿಲ್ಲ ಎಂದು ಸಾಬೀತು ಪಡಿಸಲಿ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿಲ್ಲ ಎಂದು ಸಾಬೀತು ಮಾಡಲಿ. ಚರ್ಚೆ ಮಾಡಬಹುದಿತ್ತು. ಅದಕ್ಕೆ ಇವರ ತಲೆಯಲ್ಲಿ ಏನೂ ಇಲ್ಲ, ರಾಜಕೀಯ ಮಂಜು ಕವಿದಿದೆ. ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ. ಸಾಲ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ನಾನು ಸ್ವಾತಂತ್ರ್ಯ ಬಂದಾಗಿನಿಂದ ಹಣಕಾಸಿನ ಮಂತ್ರಿಯಾಗಿರುವವರೆಗೆ ಈ ರಾಜ್ಯದ  ಮೇಲೆ 2,46,000 ಕೋಟಿ ಸಾಲವಿದ್ದು, ನಾನು ಮಾಡಿರುವುದು 1.12 ಲಕ್ಷ  ಕೋಟಿ ರೂಪಾಯಿಗಳು ಮಾತ್ರ. ಇವರ ಬಜೆಟಿನಲ್ಲಿ ಕಳೆದ ವರ್ಷ 80 ಸಾವಿರ ಕೋಟಿ ರೂಪಾಯಿಗಳ ಸಾಲ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ಲೇಷಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿಗೆ ಸಂಸದೀಯ, ಪ್ರಜಾಫ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರ ತಲೆ ತುಂಬ ರಾಜಕೀಯ ಮಂಜು ತುಂಬಿದೆ : ಸಿಎಂ ಸಿದ್ದರಾಮಯ್ಯ Rating: 5 Reviewed By: karavali Times
Scroll to Top