ಬಂಟ್ವಾಳ, ಫೆಬ್ರವರಿ 07, 2024 (ಕರಾವಳಿ ಟೈಮ್ಸ್) : ಸ್ವತಃ ಮಾದಕ ವಸ್ತು ಎಂಡಿಎಂಎ ಸೇವಿಸಿದ್ದಲ್ಲದೆ ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಓರ್ವ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಗಳನ್ನು ಮಂಚಿ ಗ್ರಾಮದ ನಿವಾಸಿಗಳಾದ ಅಬ್ದುಲ್ ರಹೀಜ್ (23) ಹಾಗೂ ದಾವುದುಲ್ ಅಮೀರ್ (26) ಮತ್ತು ಪರಾರಿಯಾದಾತನನ್ನು ಕುಕ್ಕಾಜೆ ನಿವಾಸಿ ನಝೀರ್ ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ ಬಂಟ್ವಾಳ ನಗರ ಠಾಣಾ ಪಿಎಸ್ಐ ರಾಮಕೃಷ್ಣ ನೇತೃತ್ವದ ಪೊಲೀಸರು ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಬ್ರಹ್ಮರಕೋಟ್ಲು ಎಂಬಲ್ಲಿ, ವಾಹನ ತಪಾಸಣೆಗಾಗಿ ನಂಬರ್ ಪ್ಲೇಟ್ ಇಲ್ಲದ
ದ್ವಿಚಕ್ರ ವಾಹನದಲ್ಲಿ ಮೂವರು ಸವಾರರು ತೆರಳುತ್ತಿದ್ದವರನ್ನು ನಿಲ್ಲಿಸಲು ಸೂಚಿಸಿದಾಗ, ಮೋಟಾರ್ ಸೈಕಲಿನಲ್ಲಿದ್ದ ಸಹ ಸವಾರರಿಬ್ಬರ ಪೈಕಿ, ಓರ್ವ ಸಹ ಸವಾರ ಮೋಟಾರ್ ಸೈಕಲಿನಿಂದ ಇಳಿದು ಓಡಿ ಹೋಗಿದ್ದು. ಮೋಟಾರ್ ಸೈಕಲ್ ಸವಾರ ಅಬ್ದುಲ್ ರಹೀಜ್ ಹಾಗೂ ಸಹ ಸವಾರ ದಾವುದುಲ್ ಅಮೀರ್ (26) ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರು MDMA ನಿದ್ರಾಜನಕ ಮಾದಕ ವಸ್ತು ಸೇವನೆ ಮಾಡಿರುವುದು ತಿಳಿದು ಬಂದಿದೆ. ಬಳಿಕ ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ ಆರೋಪಿಗಳು ಮಾರಾಟಕ್ಕಾಗಿ ಸಾಗಿಸುತ್ತಿದ್ದ ಸುಮಾರು 4,000/- ರೂಪಾಯಿ ಮೌಲ್ಯದ ಒಟ್ಟು 4 ಗ್ರಾಮ್ 04 ಮಿ ಗ್ರಾಂ ತೂಕದ ನಿದ್ರಾಜನಕ MDMA ದೊರೆತಿದೆ. ಅಲ್ಲದೆ ಮೋಟಾರ್ ಸೈಕಲ್ ಹಾಗೂ ಆರೋಪಿ ಅಬ್ದುಲ್ ರಹೀಜ್ ಎಂಬಾತನ ಮೊಬೈಲ್ ಪೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2024 ಕಲಂ 8(C), 22(b) NDPS Act 1985 ರಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment