ಬಂಟ್ವಾಳ, ಫೆಬ್ರವರಿ 08, 2024 (ಕರಾವಳಿ ಟೈಮ್ಸ್) : ಬಿಸಿಯೂಟ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಫೆಬ್ರವರಿ 16ರಂದು ಅಕ್ಷರ ದಾಸೋಹ ನೌಕರರು ತಮ್ಮ ಕೆಲಸ ನಿಲ್ಲಿಸಿ ಬಿ ಸಿ ರೋಡಿನ ಮಿನಿ ವಿಧಾನ ಸೌಧದ ಎದುರುಗಡೆ ಪ್ರತಿಭಟನೆ ನಡೆಸಲಿದ್ದಾರೆ.
ಆಹಾರ, ಆರೋಗ್ಯ, ಶಿಕ್ಷಣ ಮಕ್ಕಳ ಹಕ್ಕಾಗಬೇಕು, ಕೇಂದ್ರ ಸರಕಾರವು ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಅನುದಾನ ನೀಡಬೇಕು, ಕನಿಷ್ಟ ಕೂಲಿ 31 ಸಾವಿರ ರೂಪಾಯಿ ಜಾರಿ ಆಗಬೇಕು, ಕರ್ನಾಟಕ ಸರಕಾರ ಭರವಸೆ ನೀಡಿದ ಆರನೇ ಗ್ಯಾರಂಟಿಯಾದ ಬಿಸಿಯೂಟ ನೌಕರರಿಗೆ 6 ಸಾವಿರ ರೂಪಾಯಿ ವೇತನ ಮತ್ತು ನಿವೃತ್ತಿ ಸೌಲಭ್ಯ ಜಾರಿ ಮಾಡಬೇಕು, ನಿವೃತ್ತಿಯಾದವರಿಗೆ ಮಾಸಿಕ ಪಿಂಚಣಿ 10 ಸಾವಿರ ರೂಪಾಯಿ ಜಾರಿ ಮಾಡಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, 29 ಕಾರ್ಮಿಕ ಕಾನೂನುಗಳನ್ನು 4 ಕಾರ್ಮಿಕ ಸಂಹಿತೆಗಳನ್ನಾಗಿ ರೂಪಿಸಿರುವ ಕ್ರಮ ಹಿಂಪಡೆಯಬೇಕು, 4ನೇ ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್‍ಸಿ) ಶಿಫಾರಸ್ಸು ಜಾರಿ ಮಾಡಬೇಕು, ಬಿಸಿಯೂಟ ನೌಕರರಿಗೆ ಪರಿಹಾರ ನೀಡದೇ ನಿವೃತ್ತಿ ಮಾಡಬಾರದು, ಈಗಾಗಲೇ ನಿವೃತ್ತಿಯಾದವರಿಗೆ ಇಡಿಗಂಟು ನೀಡಬೇಕು, ಬಿಸಿಯೂಟ ಸಿಬ್ಬಂದಿಯ ಕೆಲಸದ ಅವಧಿ 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು, ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ತರಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ಪ್ರಗತಿಪರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಎಐಸಿಸಿಟಿಯು) ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
0 comments:
Post a Comment