ಪುರಸಭಾ ಕಚೇರಿ ಸಮೀಪವೇ ಇರುವ ಬಂಟ್ವಾಳ ಪೇಟೆಗೆ 400 ವರ್ಷಗಳ ಇತಿಹಾಸವಿದ್ದರೂ ಅಭಿವೃದ್ದಿ ಶೂನ್ಯ, ಮೂಲಭೂತ ಸೌಲಭ್ಯಗಳೂ ಇಲ್ಲ - Karavali Times ಪುರಸಭಾ ಕಚೇರಿ ಸಮೀಪವೇ ಇರುವ ಬಂಟ್ವಾಳ ಪೇಟೆಗೆ 400 ವರ್ಷಗಳ ಇತಿಹಾಸವಿದ್ದರೂ ಅಭಿವೃದ್ದಿ ಶೂನ್ಯ, ಮೂಲಭೂತ ಸೌಲಭ್ಯಗಳೂ ಇಲ್ಲ - Karavali Times

728x90

1 February 2024

ಪುರಸಭಾ ಕಚೇರಿ ಸಮೀಪವೇ ಇರುವ ಬಂಟ್ವಾಳ ಪೇಟೆಗೆ 400 ವರ್ಷಗಳ ಇತಿಹಾಸವಿದ್ದರೂ ಅಭಿವೃದ್ದಿ ಶೂನ್ಯ, ಮೂಲಭೂತ ಸೌಲಭ್ಯಗಳೂ ಇಲ್ಲ

ಪಾಣೆಮಂಗಳೂರು ಪೇಟೆಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸದೆ ಹಳೆ ನೇತ್ರಾವತಿ ಸೇತುವೆಗೆ ತಡೆ ಹಾಕದಿರಲು ಮನವಿ 


ಬಂಟ್ವಾಳ ಪುರಸಭಾ ಬಜೆಟ್ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಪುರವಾಸಿಗಳ ಅಳಲು


ಬಂಟ್ವಾಳ, ಫೆಬ್ರವರಿ 01, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಪೇಟೆಗೆ 400 ವರ್ಷಗಳ ಇತಿಹಾಸವಿದ್ದು, ಪುರಸಭಾ ಕಚೇರಿಗೆ ತಾಗಿಕೊಂಡೇ ಈ ಪೇಟೆ ಇದ್ದರೂ ಇದುವರೆಗೂ ಯಾವುದೇ ಅಭಿವೃದ್ದಿ ಕಾರ್ಯಗಳಾಗಲೀ, ಮೂಲಭೂತ ಸೌಲಭ್ಯಗಳಾಗಲೀ ಪುರಸಭಾ ವತಿಯಿಂದ ಇನ್ನೂ ಆಗಿಲ್ಲ ಎಂದು ಬಿ ಕಸಬಾ ಗ್ರಾಮದ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಗುರುವಾರ ಸಂಜೆ ಪುರಸಭಾ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿಯಾಗಿ ನಡೆದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ಥಳೀಯ ಪುರವಾಸಿಗಳು ಬಂಟ್ವಾಳ-ಬಡ್ಡಕಟ್ಟೆ ಪರಿಸರದಲ್ಲಿ ಪುರಸಭೆಯಿಂದ ನಿರ್ಮಾಣವಾಗಿರುವ ಬಸ್ ನಿಲ್ದಾಣ ಕಳೆದ ಹಲವು ವರ್ಷಗಳಿಂದ ಭಿಕ್ಷುಕರ ತಾಣವಾಗಿ, ನರಿ-ನಾಯಿಗಳ ಅಡ್ಡೆಯಾಗಿ ಪಾಲು ಬಿದ್ದಿದೆ. ಬಸ್ಸುಗಳಂತೂ ಈ ನಿಲ್ದಾಣಕ್ಕೆ ಪ್ರವೇಶವನ್ನೇ ಪಡೆಯುದಿಲ್ಲ. ಪೇಟೆಯ ರಸ್ತೆ, ಚರಂಡಿಗಳು ಅಸಮರ್ಪಕವಾಗಿದ್ದು ಸಾರ್ವಜನಿಕರ ಪಾಲಿಗೆ ನರಕಸದೃಶವಾಗಿದೆ. ಪೇಟೆಯಲ್ಲಿ ಶೌಚಾಲಯದ ವ್ಯವಸ್ಥೆಗಳೂ ಇರುವುದಿಲ್ಲ. ಬೀದಿ ದೀಪಗಳು ಕೆಟ್ಟು ಹೋಗಿ ಇಡೀ ಪೇಟೆ ಕತ್ತಲಲ್ಲಿದ್ದು, ತಾಲೂಕಿನಾದ್ಯಂತ ಕಳ್ಳರು-ದರೋಡೆಕೋರರ ಕೈ ಚಳಕ ನಿತ್ಯವೂ ವರದಿಯಾಗುತ್ತಿದ್ದು, ಬಂಟ್ವಾಳ ಪೇಟೆಯ ವರ್ತಕರು ತಮ್ಮ ಸೊತ್ತುಗಳನ್ನು ರಕ್ಷಿಸಲು ಸ್ವತಃ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಪರಿಸ್ಥಿತಿದೆ ಇದೆ. ದೇವಸ್ಥಾನದ ವತಿಯಿಂದ ಲಕ್ಷಾಂತರ ರೂಪಾಯಿ ಮೊತ್ತವನ್ನು ಪುರಸಭೆಯ ಅಧಿಕಾರಿಗಳ ಮಾತು ನಂಬಿ ಅಡ್ವಾನ್ಸ್ ಕೆಲಸಕ್ಕೆ ನೀಡಿರುವುದು ವರ್ಷಗಳು ಹಲವು ಕಳೆದರೂ ಇನ್ನೂ ಬಿಲ್ ಪಾವತಿಯಾಗಿರುವುದಿಲ್ಲ. ಈ ಎಲ್ಲಾ ಸಮಸ್ಯೆಗಳು ಪುರಸಭೆಗೆ ತಾಗಿಕೊಂಡಿರುವ ಪೇಟೆಯಲ್ಲೇ ಇದ್ದು, ಇಲ್ಲಿನ ಸದಸ್ಯರುಗಳು ಇದ್ಯಾವುದೂ ತಮಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಸಮಲೋಚನ ಸಭೆಗೆ ಕೌನ್ಸಿಲರುಗಳನ್ನು ಆಹ್ವಾನಿಸಿದ್ದರೆ  ಈ ಎಲ್ಲ ಸಮಸ್ಯೆಗಳನ್ನೂ ಅವರ ಸಮ್ಮುಖದಲ್ಲೇ ಪ್ರಸ್ತಾಪಿಸಬಹುದಿತ್ತು. ಸದಸ್ಯರಿಲ್ಲದೆ ಸಭೆಯಲ್ಲಿ ಸಮಸ್ಯೆಗಳನ್ನು ಕೇವಲ ಅಧಿಕಾರಿಗಳ ಮುಂದೆ ಮಾತ್ರ ಹೇಳುವಂತಾಗಿದೆ ಎಂದು ಸ್ಥಳೀಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. 

ಪಾಣೆಮಂಗಳೂರು ಪೇಟೆ ಪ್ರವೇಶಿಸಲು ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಿ

ಪಾಣೆಮಂಗಳೂರು ಪೇಟೆ ಪ್ರವೇಶಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆ ಅವಕಾಶ ಕಲ್ಪಿಸಿದ ಬಳಿಕ ಮಾತ್ರ ಇಲ್ಲಿನ ಹಳೆ ನೇತ್ರಾವತಿ ಸೇತುವೆಗೆ ತಡೆ ಹಾಕುವಂತೆ ಪಾಣೆಮಂಗಳೂರು ಪೇಟೆಯ ನಾಗರಿಕರು ಆಗ್ರಹಿಸಿದರು. ಏಕಾಏಕಿ ಹಳೆ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿದರೆ ಪಾಣೆಮಂಗಳೂರು ಪೇಟೆಯ ನಾಗರಿಕರು ಹೊರ ಜಗತ್ತಿನ ಸಂಪರ್ಕವೇ ಕಳೆದುಕೊಂಡಂತಾಗಲಿದೆ. ಇಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಸಾಗಿಸುವ ಶೈಕ್ಷಣಿಕ ಸಂಸ್ಥೆಗಳ ವಾಹನಗಳು, ಅಂಗಡಿ-ವ್ಯವಹಾರ ಕೇಂದ್ರಗಳಿಗೆ ಸಾಮಾನು-ಸರಂಜಾಮು ಸಾಗಾಟ ನಡೆಸುವ ವಾಹನಗಳು ಬರದೆ ಪೇಟೆ ಅಸ್ತಿತ್ವ ಕಳೆದುಕೊಳ್ಳಲಿರುವ ಭೀತಿ ಎದುರಾಗಿದ್ದು ಈ ನಿಟ್ಟಿನಲ್ಲಿ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಬಳಿಕವಷ್ಟೇ ಸೇತುವೆಗೆ ತಡೆ ಹಾಕಬೇಕು ಎಂದು ಆಗ್ರಹಿಸಿದರು. 

ಪಾಣೆಮಂಗಳೂರು ಪೇಟೆಯ ಟ್ರಾಫಿಕ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ (ಹಳೆಯ ಸಿಂಡಿಕೇಟ್ ಬ್ಯಾಂಕ್) ಬಳಿಯಲ್ಲಿ ಅರ್ಧ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಪೂರ್ಣವಾಗಿ ಅಭಿವೃದ್ದಿಪಡಿಸಿ ಸ್ಮಶಾನ ರಸ್ತೆಯಾಗಿ ಪೇಟೆ ಸಂಪರ್ಕಿಸುವಂತೆ ಕ್ರಮ ಕೈಗೊಳ್ಳುವಂತೆಯೂ ನಾಗರಿಕರು ಸಲಹೆ ನೀಡಿದರು. 

ಮೆಲ್ಕಾರ್ ಪರಿಸರದಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಪುರಸಭಾ ವತಿಯಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುದಾನ ಒದಗಿಸಿದರೆ ಪುರಸಭಾ ವ್ಯಪ್ತಿಯ ಅಂಗನವಾಡಿಗಳನ್ನು ಅಭಿವೃದ್ದಿಪಡಿಸಲು ಸಾಧ್ಯವಿದೆ ಎಂಬ ಸಲಹೆ ಜನರಿಂದ ಕೇಳಿ ಬಂತು. ಉಳಿದಂತೆ ಕಸ ಹಾಗೂ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸುವಂತೆಯೂ ಆಗ್ರಹಿಸಿದರು. 

ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಆರೋಗ್ಯಾಧಿಕಾರಿ ರತ್ನಪ್ರಸಾದ್ ಮೊದಲಾದವರು ಸಭೆಯಲ್ಲಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಪುರಸಭಾ ಕಚೇರಿ ಸಮೀಪವೇ ಇರುವ ಬಂಟ್ವಾಳ ಪೇಟೆಗೆ 400 ವರ್ಷಗಳ ಇತಿಹಾಸವಿದ್ದರೂ ಅಭಿವೃದ್ದಿ ಶೂನ್ಯ, ಮೂಲಭೂತ ಸೌಲಭ್ಯಗಳೂ ಇಲ್ಲ Rating: 5 Reviewed By: karavali Times
Scroll to Top