ಬೆಂಗಳೂರು, ಫೆಬ್ರವರಿ 04, 2024 (ಕರಾವಳಿ ಟೈಮ್ಸ್) : ಅಖಿಲ ಭಾರತ ಮುನ್ಸಿಪಲ್ ವರ್ಕರ್ಸ್ ಫೆಡರೇಶನ್ (AIMWF) AICCTU ಸಂಯೋಜಿತ ಇದರ 3ನೇ ರಾಷ್ಟ್ರೀಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದು ಸಮ್ಮೇಳನವು ಶನಿವಾರ (ಫೆ 3) ಉದ್ಘಾಟನೆಗೊಂಡಿತು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಎಐಸಿಸಿಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ರಾಜೀವ್ ದಿಮ್ರಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಫಾಯಿ ಕರ್ಮಚಾರಿಗಳು ಹೇಗೆ ಹೋರಾಡಬೇಕು. "ಹಿಂದೂ ರಾಷ್ಟ್ರವು ಕಾರ್ಮಿಕರು ಮತ್ತು ದಲಿತರ ಮೇಲಿನ ದಾಳಿಯಾಗಿದೆ. ಅದು ಮನುಸ್ಮೃತಿಯನ್ನು ಸ್ಥಾಪಿಸುತ್ತದೆ" ಎಂದು ಆರೋಪಿಸಿದರು "ಮೋದಿಯವರು ಸಫಾಯಿ ಕರ್ಮಚಾರಿಗಳ ಪಾದಗಳನ್ನು ತೊಳೆದು ತಮ್ಮ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಸಫಾಯಿ ಕರ್ಮಚಾರಿಗಳ ಜೀವನ ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಸರ್ಕಾರ ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ. ಸ್ವಚ್ಛ ಭಾರತ ಅಭಿಯಾನವು ಜಾತಿ ತಾರತಮ್ಯ ವನ್ನು ಮುಂದುವರಿಸುತ್ತದೆ ಎಂದರು. ಫೆಬ್ರವರಿ 16 ರಂದು ಎಲ್ಲಾ ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಕೈಗಾರಿಕಾ ಮತ್ತು ಗ್ರಾಮೀಣ ಬಂದ್‌ಗೆ ಪೌರಾಡಳಿತ ಕಾರ್ಮಿಕರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಅದರ ಭಾಗವಾಗುವುದು ಅಗತ್ಯ ಎಂದು ಕರೆ ನೀಡಿದರು. ಎಐಸಿಸಿಟಿಯುನ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪಿ.ಪಿ. ಅಪ್ಪಣ್ಣ ಮಾತನಾಡಿ, ಪೌರ ಕಾರ್ಮಿಕರು ನಿರ್ವಹಿಸುವ ಕೆಲಸದ ಮಹತ್ವ ಮತ್ತು ಗುತ್ತಿಗೆ ಕಾರ್ಮಿಕರು ಜೀತ ಪದ್ದತಿಯ ವಿರುದ್ಧ ಹೋರಾಡುವ ಅಗತ್ಯತೆಯ ಬಗ್ಗೆ ಮಾತನಾಡಿದರು. ಬಿಜೆಪಿ ಸರ್ಕಾರವು ಕಾರ್ಮಿಕರಿಗೆ ಹೊಸ ಕಾಯ್ದೆಗಳನ್ನು ಜಾರಿಗೊಳಿಸುವುದರ ಮೂಲಕ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಲು ಬಯಸಿದೆ, ನಾವು ಅದಕ್ಕೆ ಅನುಮತಿಸುವುದಿಲ್ಲ ಮತ್ತು ಅದರ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದರು. ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ, ಮುಕ್ತ ಅಧಿವೇಶನವನ್ನು ಆಯೋಜಿಸಲಾಗಿದೆ, ಇದರಲ್ಲಿ ನೂರಾರು ಜನ ಕಾರ್ಮಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿಗಳು ಮತ್ತು ಪೌರಕಾರ್ಮಿಕರ ಜೀವನ ಕುರಿತು ‘ಪೊರಕೆಯ ಹಾಡು’ ನಾಟಕ ಪ್ರದರ್ಶನ, ಪ್ರಗತಿ ಕಲಾ ತಾಂಡಾದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಮಾತನಾಡಿ, ಗೌರವಯುತ ಮತ್ತು ಸುರಕ್ಷಿತ ಕೆಲಸದ ಪರಿಸ್ಥಿತಿಗಳಿಗಾಗಿ ಕರ್ನಾಟಕದಲ್ಲಿ ಎ.ಐ.ಸಿ.ಸಿ.ಟಿ.ಯು ವತಿಯಿಂದ ನಡೆದ ಪೌರಕಾರ್ಮಿಕರ ನಿರಂತರ ಹೋರಾಟ ನಡೆದಿದ್ದು ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ತ್ಯಾಜ್ಯ ನಿರ್ವಹಣೆಯಿಂದ ಸಂಪೂರ್ಣವಾಗಿ ತೊಲಗಿಸಬೇಕು. ಪೌರಕಾರ್ಮಿಕರು ಜಾತಿ, ಲಿಂಗ ಮತ್ತು ವರ್ಗದ ಟ್ರಿಪಲ್ ದಬ್ಬಾಳಿಕೆಯನ್ನು ಎದುರಿಸುತ್ತಿದ್ದು ಮತ್ತು ಗೌರವಾನ್ವಿತ ಬದುಕಿಗಾಗಿ ಹಲವಾರು ಸಂಕಷ್ಟವನ್ನು ಎದುರಿಸುತ್ತಿದ್ದು ಈ ನಿಟ್ಟಿನಲ್ಲಿ ಪೌರ ಕಾರ್ಮಿಕರು ಸಂಘಟಿತರಾಗಬೇಕೆಂದು ಕರೆ ನೀಡಿದರು.
ಸರಕಾರ ಪೌರ ಕಾರ್ಮಿಕರ ಬೇಡಿಕೆ ಈಡೇರದಿದ್ದಲ್ಲಿ ಮತ್ತೆ ಬೀದಿಗಿಳಿಯುತ್ತೇವೆ ಎಂದು ಹೇಳಿದರು.
ಸಮ್ಮೇಳನದ ವರದಿಯನ್ನು ಎಐಎಂಡಬ್ಲ್ಯುಎಫ್‌ನ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಶ್ಯಾಮಲ್ ಪ್ರಸಾದ್ ಮಂಡಿಸಿದರು ಮತ್ತು ಸಮಾವೇಶದ 1 ನೇ ದಿನದಂದು ಬೇಡಿಕೆಗಳನ್ನು ಮುಂದಿಡಲಾಯಿತು.
ಎರಡು ದಿನಗಳ ಸಮ್ಮೇಳನವು ಭಾನುವಾರ (ಫೆ 4) ಮುಕ್ತಾಯಗೊಳ್ಳಲಿದ್ದು, ಪ್ರತಿನಿಧಿಗಳು ದೇಶಾದ್ಯಂತ ಸಫಾಯಿ ಕರ್ಮಚಾರಿಗಳ ರಾಷ್ಟ್ರವ್ಯಾಪಿ ಹೋರಾಟಗಳು ಮತ್ತು ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದ್ದು, ಇದರಲ್ಲಿ ಪೌರ ಕಾರ್ಮಿಕರ ಘನತೆಯ ಜೀವನ ಮತ್ತು ಕೆಲಸದ ಪರಿಸ್ಥಿತಿಗಳು, ಹೋರಾಟ ,ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ಯಾಶಿಸ್ಟ್ ಶಕ್ತಿ ಗಳನ್ನು ಸೋಲಿಸುವ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ.
ಸಭೆಯಲ್ಲಿ AICCTU ರಾಷ್ಟ್ರೀಯ ಅದ್ಯಕ್ಷರಾದ ಕಾಮ್ರೇಡ್ ಶಂಕರ್ ಸಿಪಿ.ಐ.ಎಂ.ಎಲ್.ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕ್ಲಿಫ್ಟನ್ ಡಿ ರೊಜೊರಿಯೋ ,ಮುಖಂಡರಾದ ಕಾಮ್ರೇಡ್ ಮೈತ್ರೇಯಿ ಕೃಷ್ಣನ್, ಕಾಮ್ರೇಡ್ ಸುಚಿತ್ರಾ, ಕಾಮ್ರೇಡ್ ಉದಯ ಭಟ್ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.
0 comments:
Post a Comment