ಬಂಟ್ವಾಳ, ಜನವರಿ 25, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ನಂದಾವರ-ಬಂಗ್ಲೆಗುಡ್ಡೆ ಕ್ರಾಸ್ ಬಳಿ ಕಳೆದ ಕೆಲ ತಿಂಗಳುಗಳಿಂದ ಚರಂಡಿಯ ಕೊಳಚೆ ನೀರು ಮುಖ್ಯ ರಸ್ತೆಗೆ ಬಂದು ಅಸಹ್ಯ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಪುರಸಭಾ ಕಾರ್ಯನಿರ್ವಹಣ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಣೆಮಂಗಳೂರು ಮುಖ್ಯ ರಸ್ತೆಯಲ್ಲಿ ಹಾದು ಹೋಗಿರುವ ಚರಂಡಿಯಲ್ಲಿನ ಕೊಳಚೆ ನೀರು ಚರಂಡಿಯಿಂದ ಹೊರಕ್ಕೆ ಬರುತ್ತಿದ್ದು, ಬಂಗ್ಲೆಗುಡ್ಡೆ ಶ್ರೀ ಶಾರದಾ ಪ್ರೌಢಶಾಲೆ ಹಾಗೂ ಎಸ್ ಎಲ್ ಎನ್ ಪಿ ವಿದ್ಯಾಲಯದ ಮುಖ್ಯ ರಸ್ತೆಯಲ್ಲೇ ಹರಿದು ಬರುತ್ತಿದೆ. ಕಳೆದ ಕೆಲ ತಿಂಗಳಿನಿಂದ ಈ ಕೊಳಚೆ ನೀರು ಹರಿಯುತ್ತಿದ್ದು ಪರಿಸರದಲ್ಲಿ ಅಸಹ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ದುರ್ನಾತ ಬೀರುತ್ತಿದೆ.
ಈ ರಸ್ತೆಯಲ್ಲಿ ನಡೆದುಕೊಂಡು ಬರುವ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ನಿತ್ಯವೂ ಈ ಕೊಳಚೆ ನೀರನ್ನೇ ತುಳಿದುಕೊಂಡು ಹೋಗುತ್ತಿದ್ದು ಸ್ವಚ್ಛತೆಗೇ ಸವಾಲಾಗಿ ಪರಿಣಮಿಸಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಸಂಬಂಧಪಟ್ಟ ಪುರಸಭಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ದೂರಿಕೊಂಡರೂ ಯಾವುದೇ ಸ್ಪಂದನೆ ಇರುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಯಿಸಿರುವ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ನಡೆದಾಡುವ ಈ ರಸ್ತೆಯಲ್ಲಿ ಈ ರೀತಿಯಾಗಿ ಕೊಳಚೆ ನೀರು ಹರಿದು ಬರುತ್ತಿದ್ದರೂ ಈ ಬಗ್ಗೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗಮನ ಹರಿಸದೆ ಕಣ್ಣಿದ್ದೂ ಕುರುಡಾಗಿರುವುದು ವ್ಯವಸ್ಥೆಯ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಈ ಚರಂಡಿ ನೀರು ಇದೇ ರೀತಿ ಮುಖ್ಯ ರಸ್ತೆಯಲ್ಲಿ ತಿಂಗಳುಗಟ್ಟಲೆ ಹರಿದರೂ ಯಾರೂ ಕ್ರಮ ಕೈಗೊಳ್ಳದ ಬಗ್ಗೆ ಪತ್ರಿಕೆ ಸಚಿತ್ರ ವರದಿ ಮಾಡಿದ ಬಳಿಕ ಎಚ್ಚೆತ್ತ ಪುರಸಭಾಧಿಕಾರಿಗಳು ಕೊನೆಗೂ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ತೇಪೇ ಕಾಮಗಾರಿ ನಡೆಸಿದ ಪರಿಣಾಮ ಇದೀಗ ಮತ್ತೆ ಈ ವರ್ಷವೂ ಅದೇ ಸಮಸ್ಯೆ ಎದುರಾಗಿದೆ ಎಂದು ದೂರಲಾಗುತ್ತಿದೆ.
ಪಾಣೆಮಂಗಳೂರು ಪರಿಸರದಲ್ಲಿ ಪುರಸಭೆಯ ವೈಫಲ್ಯದಿಂದ ಚರಂಡಿ ಅವ್ಯವಸ್ಥೆ, ಪೈಪ್ ಲೈನ್ ಕಾಮಗಾರಿಗೆ ಗುಂಡಿಗೆ ತೆಗೆದು ಅರ್ಧದಲ್ಲಿ ಬಿಟ್ಟು ದಿನಗಟ್ಟಲೆ ಕಾಮಗಾರಿ ಕೈಗೊಳ್ಳದೆ ಇರುವುದು, ಹಳೆ ನೇತ್ರಾವತಿ ಸೇತುವೆ ಬದಿಗಳಲ್ಲಿ ಘನ ವಾಹನ ಸಂಚಾರಕ್ಕೆ ಕಬ್ಬಿಣ ರಾಡ್ ಅಳವಡಿಸುವ ನೆಪದಲ್ಲಿ ಗುಂಡಿ ತೆಗೆದು ಅರ್ಧಕ್ಕೆ ನಿಲ್ಲಿಸಿದಂತಹ ಹಲವು ಅಪೂರ್ಣ ಕಾಮಗಾರಿಗಳು ನಡೆಯುತ್ತಿದ್ದು, ಇದು ಇಡೀ ಗ್ರಾಮದ ಜನರ ತಾಳ್ಮೆಯನ್ನೇ ಪರೀಕ್ಷಿಸುತ್ತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.
0 comments:
Post a Comment