ಮಂಗಳೂರು, ಜನವರಿ 05, 2024 (ಕರಾವಳಿ ಟೈಮ್ಸ್) : ಸರಕಾರ ಇದೀಗ ನಿಗಮ-ಮಂಡಳಿ ಹುದ್ದೆಗಳಿಗೆ ನೇಮಕ ಮಾಡುವ ಪ್ರಕ್ರಿಯೆ ನಡೆಸುತ್ತಿದ್ದು, ಈ ಮಧ್ಯೆ ಬಲಿಷ್ಠ ಜಾತಿ-ಜನಾಂಗಗಳನ್ನು ಗಣನೆಗೆ ಪಡೆಯುವುದರ ಜೊತೆಗೆ ತಳಮಟ್ಟದ ಜನಾಂಗವಾಗಿರುವ ಪರಿಶಿಷ್ಟ ಜನಾಂಗದ ಮಂದಿಗೂ ಸರಕಾರದ ಮುಂಚೂಣಿ ನಿಗಮ-ಮಂಡಳಿಯ ಅಧ್ಯಕ್ಷಗಿರಿ ನೀಡುವ ಮೂಲಕ ಕಾಂಗ್ರೆಸ್ ಸರಕಾರ ತುಳಿತಕ್ಕೊಳಗಾದ ಜನಾಂಗಕ್ಕೂ ಸೂಕ್ತ ಸ್ಥಾನಮಾನ ನೀಡಿ ಸಮುದಾಯದ ಉನ್ನತಿಗೆ, ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಪರಿಶಿಷ್ಟ ಜನಾಂಗದ ಮಂದಿಯಿಂದ ಕೇಳಿ ಬರುತ್ತಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಆದಿ ದ್ರಾವಿಡ ಜನಾಂಗದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯದ ಗೃಹಮಂತ್ರಿ ಜಿ ಪರಮೇಶ್ವರ್ ಅವರು ಈ ಬಾರಿ ಪರಿಶಿಷ್ಟ ಜನಾಂಗದ ಮಂದಿಗೆ ಸರಕಾರದ ಉನ್ನತ ನಿಗಮ-ಮಂಡಳಿ ಹುದ್ದೆಯನ್ನು ನೀಡುವ ಭರವಸೆಯನ್ನು ತುಂಬಿದ ಸಭೆಯಲ್ಲಿ ನೀಡಿದ್ದರು. ಇದೀಗ ಗೃಹ ಸಚಿವರ ಮಾತು ಕಾರ್ಯರೂಪಕ್ಕೆ ಬರುವ ಕಾಲ ಒದಗಿ ಬಂದಿದೆ ಎಂದು ಸಮುದಾಯದ ಮಂದಿ ಅಭಿಪ್ರಾಯಪಡುತ್ತಿದ್ದಾರೆ.
ಸರಕಾರದ ಪ್ರತಿಷ್ಠಿತ ನಿಗಮ-ಮಂಡಳಿ ಹುದ್ದೆಗೆ ಸಮುದಾಯದ ವಿದ್ಯಾವಂತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅನುಭವವಿರುವ ಯುವಕರನ್ನು ನೇಮಿಸುವ ಮೂಲಕ ಸಮುದಾಯವನ್ನು ತಳಮಟ್ಟದಿಂದ ಅಭಿವೃದ್ದಿಪಡಿಸಲು ಅವಕಾಶ ನೀಡುವಂತೆ ಆಗ್ರಹಿಸಿರುವ ಸಮುದಾಯದ ಮಂದಿಗಳು ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂಡಿಬಿದ್ರೆ ನಿವಾಸಿಯಾಗಿರುವ ವಿದ್ಯಾವಂತ ಹಾಗೂ ವಿಶ್ವಸಂಸ್ಥೆಯ ಯುನಿಸೆಫ್ ಸಹಿತ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸಿ ಅನುಭವವುಳ್ಳ ಗಣೇಶ್ ಪ್ರಸಾದ್ ಪಾಂಡೇಶ್ವರ್ ಅವರನ್ನು ಸರಕಾರದ ಪ್ರತಿಷ್ಠಿತ ನಿಗಮ-ಮಂಡಳಿಯೊಂದರ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಆಯ್ಕೆಯಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ.
ಜೈನಕಾಶಿ, ವಿದ್ಯಾಕಾಶಿಯಾಗಿರುವ ಮೂಡಬಿದ್ರೆ ತಾಲೂಕಿನ ಮೂಡುಕೊಣಾಜೆ ನಿವಾಸಿಯಾಗಿರುವ ದೇವದಾಸ ಪಿ ಅವರ ಪುತ್ರರಾಗಿರುವ ಸುಮಾರು 30ರ ಹರೆಯದ ಪಾದರಸ ಚಲನೆಯ ಯುವಕ ಗಣೇಶ್ ಪ್ರಸಾದ್ ಪಾಂಡೇಶ್ವರ ಅವರು ಪರಿಶಿಷ್ಟ ಜಾತಿ-ತುಳು ಭಾಷಿಕ ಆದಿದ್ರಾವಿಡ ಜನಾಂಗಕ್ಕೆ ಸೇರಿದವರಾಗಿದ್ದು, ಸೋಶಿಯಲ್ ವರ್ಕ್, ಬಿಝಿನೆಸ್ ಅಡ್ಮಿಸ್ಟ್ರೇಶನ್ ಗಳಲ್ಲಿ ಮಾಸ್ಟರ್ ಪದವಿ ಪಡೆದಿದ್ದು, ಕೌನ್ಸೆಲಿಂಗ್ ಡಿಪ್ಲೋಮಾದಲ್ಲೂ ಪಿಜಿ ಮಾಡಿದ್ದು, ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಯುನಿಸೆಫ್ ನಲ್ಲಿ ಭಾರತದ ದೇಶದ ಕಾಪೆರ್Çರೇಟ್ ರಿಲೇಶನ್ ಶಿಪ್ ಮ್ಯಾನೇಜರ್ ಮತ್ತು ನೇಪಾಳ, ಶ್ರೀಲಂಕಾ ದೇಶಗಳ ಸೋಷಿಯಲ್ ಆಡಿಟ್ ಇನ್‍ಚಾರ್ಜ್ ಆಗಿ 2 ವರ್ಷಗಳ ಅನುಭವ ಹೊಂದಿದ್ದು, ಇದೀಗ ಸ್ವಯಂ ನಿವೃತ್ತಿ ಘೋಷಿಸಿ ಕಳೆದ ಐದು ವರ್ಷಗಳಿಂದ ಸಕ್ರಿಯ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಮೂಡಬಿದ್ರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಮಾಧ್ಯಮ ವಕ್ತಾರರಾಗಿ, 2023ನೇ ವಿಧಾನಸಭಾ ಚುನಾವಣೆಯ ಮುಲ್ಕಿ-ಮೂಡಬಿದ್ರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಎಸ್ಸಿ, ಎಸ್ಟಿ ವಿಭಾಗದ ಉಸ್ತುವಾರಿಯಾಗಿ, ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾಗಿರುವ ಎನ್ ಎಸ್ ಯು ಐ ಘಟಕದಲ್ಲಿ 2011 ರಿಂದ 2016ರವರೆಗೆ ಸಕ್ರಿಯ ಕಾರ್ಯಕರ್ತರಾಗಿ, ಆದಿದ್ರಾವಿಡ ಸಮುದಾಯದ ಕುಲದೈವಗಳಾದ ಅಲೇರಿ ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲಕ್ಷೇತ್ರದ ಜೊತೆ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾವೇಶ 2023ರ ಕಾರ್ಯಾಧ್ಯಕ್ಷರಾಗಿ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ, ಪಡು-ಮೂಡುಕೊಣಾಜೆ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ, ಮೂಡಬಿದ್ರಿಯ ವಿವಿಧ ಪರಿಶಿಷ್ಟ ಸಮುದಾಯಗಳ ವಿವಿಧ ದೈವಸ್ಥಾನಗಳ ಜೀರ್ಣೋದ್ದಾರ ಸಮಿತಿಯ ಗೌರವ ಸಲಹೆಗಾರರಾಗಿ ಇವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಸಕಾರತ್ಮಕ ಸೇವೆ ಸಲ್ಲಿಸಿದವರು.
ಜಿಲ್ಲೆಯ ಹಿರಿಯ ಕಾಂಗ್ರೆಸ್ ಹಿರಿಯ ಮುಖಂಡರ ಸಹಿತ ಸ್ಥಳೀಯವಾಗಿಯೂ ಎಲ್ಲಾ ನಾಯಕರುಗಳು ಇವರ ಸಾಮಾಜಿಕ, ರಾಜಕೀಯ, ಧಾರ್ಮಿಕ ಸೇವೆಗಳನ್ನು ಕಣ್ಣಾರೆ ಕಂಡು ಇವರ ರಾಜಕೀಯ ಅಭಿವೃದ್ದಿಗೆ ಶಿಫಾರಸ್ಸು ಮಾಡಿದ್ದಾರೆ.
ಹೈನುಗಾರಿಕೆ ಹಾಗೂ ಪಿಡಬ್ಲ್ಯುಡಿ ಕಂಟ್ರಾಕ್ಟರ್ ಉದ್ಯಮ ನಡೆಸುತ್ತಿರುವ ಗಣೇಶ್ ಪ್ರಸಾದ್ ಪಾಂಡೇಶ್ವರ ಅವರು ಎನ್ ಎಸ್ ಯು ಐ, ಆದಿದ್ರಾವಿಡ ಯುವ ಸಂಘಟನೆಯಲ್ಲಿ ಸಕ್ರಿಯರಾಗಿದ್ದುಕೊಂಡು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 6 ಜಿಲ್ಲೆಗಳ ಜೊತೆ ನಿರಂತರ ಹಾಗೂ ಉತ್ತಮ ಒಡನಾಟವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವುದು ಜಿಲ್ಲೆಯ ಜನರಿಗೆ ಗೊತ್ತಿರುವಂತದ್ದೇ.
ಈ ಎಲ್ಲಾ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿ ಸಾಮಾಜಿಕ ರಂಗದಲ್ಲಿ ಸೈ ಎನಿಸಿಕೊಂಡಿರುವ ಗಣೇಶ್ ಪ್ರಸಾದ್ ಅವರು ರಾಜಕೀಯ ಅನುಭವವನ್ನೂ ಹೊಂದಿ ಬಹುಭಾಷಾ ವ್ಯಾವಹಾರಿಕ ಜ್ಞಾನವನ್ನೂ ಪಡೆದುಕೊಂಡವರಾಗಿದ್ದಾರೆ. ಇಂತಹ ವಿದ್ಯಾವಂತ ಹಾಗೂ ಅನುಭವಿ ಯುವಕನನ್ನು ಸರಕಾರ ಗುರುತಿಸಿ ಸಕಾಲದಲ್ಲಿ ಪ್ರತಿಷ್ಠಿತ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ತಳಮಟ್ಟದ ಜನಾಂಗಕ್ಕೆ ಸೂಕ್ತ ಸ್ಥಾನಮಾನ ನೀಡಿ ಸಮುದಾಯದ ಅಭ್ಯುಯದಕ್ಕೆ ಅವಕಾಶ ಮಾಡಿಕೊಟ್ಟು ಕಾಂಗ್ರೆಸ್ ಸರಕಾರ ಮನ್ನಣೆ ನೀಡುವಂತೆ ಯುವಕರ ಸಹಿತ ಇಡೀ ಸಮುದಾಯದ ಮಂದಿಗಳು ಒಕ್ಕೊರಳಿನಿಂದ ಆಗ್ರಹಿಸುತ್ತಿದ್ದಾರೆ.
0 comments:
Post a Comment