ಬಂಟ್ವಾಳ, ಜನವರಿ 22, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ಜನವರಿ 11 ರಂದು ಗುರುವಾರ ಮುಂಜಾನೆ ಮನೆಯೊಂದಕ್ಕೆ ನುಗ್ಗಿ ತಾಯಿ-ಮಗಳನ್ನು ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ದರೋಡೆಗೈದ ಪ್ರಕರಣ ಬೇಧಿಸಿದ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ನೇತೃತ್ವದ ಜಿಲ್ಲಾ ಪೊಲೀಸ್ ತಂಡ ದರೋಡೆಗೈದ ಸೊತ್ತು, ಕೃತ್ಯಕ್ಕೆ ಬಳಸಿದ ವಾಹನಗಳ ಸಹಿತ 7 ಮಂದಿ ಖದೀಮರ ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಸಫಲವಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ ವಿಶೇಷ ತನಿಖಾ ತಂಡವು, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26), ದಿನೇಶ್ ನಾಯ್ಕ (22), ಸಾಗರ ಶೆಟ್ಟಿ (21) ಮಂಗಳೂರು, ತಾಲೂಕು, ಐಕಳ ಗ್ರಾಮದ ರಾಕೇಶ್ ಎಲ್ ಪಿಂಟೋ (29), ಕಡಬ ತಾಲೂಕಿನ ಬೆಳಂದೂರು ಗ್ರಾಮದ ಎಂ ಸೀತಾರಾಮ ಅಲಿಯಾಸ್ ಪ್ರವೀಣ್ (36), ಸುಧೀರ್ (29) ಹಾಗೂ ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದ ಮೂಲತ: ಬಂಟ್ವಾಳ ತಾಲೂಕಿನ, ಇರಾ ಗ್ರಾಮದ ನಿವಾಸಿ, ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಗೌರಿ ಕಾಲುವೆ ಎಂಬಲ್ಲಿ ವಾಸವಾಗಿರುವ ಮಹಮ್ಮದ್ ಹನೀಫ್ ಅಲಿಯಾಸ್ ಎಲಿ ಹನೀಫ್ (49) ಎಂಬವರುಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 3.15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ದರೋಡೆಗೆ ಬಳಸಿದ ಅಂದಾಜು 8 ಲಕ್ಷ ರೂಪಾಯಿ ಮೌಲ್ಯದ ಇನ್ನೋವಾ ಕಾರು, ಅಂದಾಜು 2 ಲಕ್ಷ ರೂಪಾಯಿ ಮೌಲ್ಯದ ಟಾಟಾ ಇಂಡಿಕಾ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪತ್ತೆಗಾಗಿ ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್, ಎಡಿಶನಲ್ ಎಸ್ಪಿಗಳಾದ ಧರ್ಮಪ್ಪ ಹಾಗೂ ರಾಜೇಂದ್ರ ಅವರುಗಳ ಮುಂದಾಳತ್ವದಲ್ಲಿ, ಬಂಟ್ವಾಳ ಡಿವೈಎಸ್ಪಿ ಎಸ್ ವಿಜಯಪ್ರಸಾದ್ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ ಬಿ, ಪೂಂಜಾಲಕಟ್ಟೆ ಪಿಎಸ್ಸೈ ನಂದಕುಮಾರ್, ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಹರೀಶ ಎಂ ಆರ್ ಅವರನ್ನೊಳಗೊಂಡ 3 ವಿಶೇಷ ಪತ್ತೆ ತಂಡಗಳನ್ನು ರಚಿಸಲಾಗಿತ್ತು. ತನಿಖಾ ತಂಡದಲ್ಲಿ ಎಎಸ್ಸೈ ಗಿರೀಶ್, ಎಚ್ ಸಿ ಗಳಾದ ಸುಜು, ರಾಧಾಕೃಷ್ಣ, ಉದಯ ರೈ, ಅದ್ರಾಮ, ಪ್ರವೀಣ್ ರೈ, ಪ್ರವೀಣ್, ಸಂದೀಪ್, ರಾಹುಲ್, ಇರ್ಷಾದ್, ರಾಜೇಶ್, ಹರಿಶ್ಚಂದ್ರ, ಪಿಸಿಗಳಾದ ಪುನೀತ್, ರಮ್ಜಾನ್, ಯೊಗೇಶ್ ಡಿ ಎಲ್, ಕುಮಾರ್ ಎಚ್ ಕೆ, ವಿನಾಯಕ ಬಾರ್ಕಿ, ಜಗದೀಶ ಅತ್ತಾಜೆ, ಜಮೀರ್ ಕಲಾರಿ, ಎ ಎಚ್ ಸಿ ಗಳಾದ ಕುಮಾರ್, ಮಹಾಂತೇಶ್, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಹಾಗೂ ಸಂಪತ್ ಅವರುಗಳು ದರೋಡೆಕೋರರ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಆರೋಪಿಗಳ ಪೈಕಿ ಗಣೇಶ ನಾಯ್ಕ ಎಂಬಾತನು 2023ನೇ ಸಾಲಿನಲ್ಲಿ ಮಂಗಳೂರು ನಗರ ವ್ಯಾಪ್ತಿಯ ಮುಲ್ಕಿಯಲ್ಲಿ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯಿಂದ ಅಪಾರ ಮೊತ್ತದ ನಗದು, ಚಿನ್ನಾಭರಣ, ವಜ್ರ ಕಳವು ಮಾಡಿದ ಪ್ರಮುಖ ಆರೋಪಿಯಾಗಿದ್ದು, ಉಳಿದಂತೆ ಸೀತಾರಾಮ ಅಲಿಯಾಸ್ ಪ್ರವೀಣ್, ಸುಧೀರ್ ಹಾಗೂ ಮಹಮ್ಮದ್ ಹನೀಫ್ ಅಲಿಯಾಸ್ ಎಲಿ ಹನೀಫ್ ಅವರ ವಿರುದ್ದ ದಕ್ಷಿಣ ಕನ್ನಡ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಪ್ರಕರಣ ಬೇಧಿಸಿದ ತನಿಖಾ ತಂಡಕ್ಕೆ ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ಬಹುಮಾನ ಘೋಷಿಸಿದ್ದಾರೆ.
ತಾಲೂಕಿನ ಕಾವಳಪಡೂರು ಗ್ರಾಮದ ಬಿ ಸಿ ರೋಡು-ಬೆಳ್ತಂಗಡಿ ರಾಜ್ಯ ಹೆದ್ದಾರಿ ರಸ್ತೆಯ ಸಾಲುಮರ ತಿಮ್ಮಕ್ಕ ಉದ್ಯಾನವನ ಸಮೀಪದ ಮೇನಾಡು ಎಂಬಲ್ಲಿ ಜನವರಿ 11 ರಂದು ಗುರುವಾರ ಮುಂಜಾನೆ ಇಲ್ಲಿನ ನಿವಾಸಿ ಮೆರಿಟಾ ಸಿಂಥಿಯಾ ಪಿಂಟೋ ಅವರ ಮನೆಯಲ್ಲಿ ಆರೋಪಿಗಳು ದರೋಡೆ ನಡೆಸಿ ಪರಾರಿಯಾಗಿದ್ದರು. ಸಿಂಥಿಯಾ ಪಿಂಟೋ ಅವರು ತನ್ನ ಪ್ರಾಯಸ್ಥ ತಾಯಿಯ ಜೊತೆ ಮನೆಯಲ್ಲಿ ಇಬ್ಬರೇ ವಾಸ್ತವ್ಯ ಹೊಂದಿದ್ದು, ಮುಂಜಾನೆ ವೇಳೆಗೆ 4 ಮಂದಿ ಅಪರಿಚಿತ ವ್ಯಕ್ತಿಗಳು ಮನೆಯ ಕಾಲಿಂಗ್ ಬೆಲ್ ಒತ್ತಿದ್ದು, ಈ ವೇಳೆ ಸಿಂಥಿಯಾ ಅವರು ಬಾಗಿಲು ತೆರೆದಾಗ ಒಳಪ್ರವೇಶಿಸಿದ ನಾಲ್ಕೂ ಮಂದಿ ಸೇರಿ ಇಬ್ಬರು ಮಹಿಳೆಯರಿಗೂ ಚಾಕು ತೋರಿಸಿ ಬೆದರಿಸಿ ಮನೆಯಲ್ಲಿ ಜಾಲಾಡಿದ್ದಾರೆ. ಕಪಾಟಿನಲ್ಲಿದ್ದ 3.20 ಲಕ್ಷ ರೂಪಾಯಿ ಮೌಲ್ಯದ 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳು, 11 ಸಾವಿರ ರೂಪಾಯಿ ಮೌಲ್ಯದ 2 ಮೊಬೈಲ್ ಫೆÇೀನ್‍ಗಳನ್ನು ಸುಲಿಗೆ ಮಾಡಿರುವುದಲ್ಲದೆ ಮಹಳೆಯರಿಗೆ ಬೆದರಿಕೆ ಒಡ್ಡಿ 30 ಸಾವಿರ ರೂಪಾಯಿ ನಗದು ಹಣವನ್ನು ಪಡೆದು ಪರಾರಿಯಾಗಿದ್ದರು.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್ ಹಾಗೂ ಎಡಿಶನಲ್ ಎಸ್ಪಿ ಸೇರಿದಂತೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಮನೆ ಮಾಲಕಿ ಮೆರಿಟಾ ಸಿಂಥಿಯಾ ಪಿಂಟೋ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2024 ಕಲಂ 395, 397, 411 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಇದೀಗ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಆರೋಪಿಗಳ ಜಾಡು ಬೇಧಿಸುವಲ್ಲಿ ಸಫಲರಾಗಿದ್ದಾರೆ.
0 comments:
Post a Comment