ಬಂಟ್ವಾಳ, ಜನವರಿ 17, 2024 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್ನಿನ ರೆಂಗೇಲು ರಸ್ತೆಯ ಬದಿ ಖಾಸಗಿ ಜಮೀನಿಗೆ ಸಂಬಂಧಿಸಿದವರು ಯಾವುದೇ ಪರವಾನಿಗೆ ಇಲ್ಲದೆ ಅವೈಜ್ಞಾನಿಕವಾಗಿ ಭಾರೀ ಪ್ರಮಾಣದಲ್ಲಿ ಕಲ್ಲು ಸ್ಫೋಟ ನಡೆಸುತ್ತಿರುವ ಪರಿಣಾಮ ಪರಿಸರವಾಸಿಗಳು ನಿದ್ದೆಗೆಡುವಂತಾದ ಪ್ರಕರಣ ವರದಿಯಾಗಿದೆ.
ಮೆಲ್ಕಾರ್ ಆರ್ ಟಿ ಒ ಕಚೇರಿ ಸಮೀಪದಲ್ಲೇ ಈ ಬೃಹತ್ ಪ್ರಮಾಣದ ಕಲ್ಲು ಸ್ಫೋಟ ನಡೆಯುತ್ತಿದ್ದು, ಆರ್ ಟಿ ಒ ಕಚೇರಿಯ ವಾಹನಗಳ ಟೆಸ್ಟ್ ಡ್ರೈವ್ ಇಲ್ಲೇ ಮೈದಾನದಲ್ಲಿ ನಡೆಯುತ್ತಿದೆ. ಸರಕಾರಿ ಕಚೇರಿಯ ಅಧಿಕಾರಿಗಳ ಕಣ್ಣಮುಂದೆಯೇ ಅಕ್ರಮ ಸ್ಫೋಟಗಾರಿಕೆ ನಡೆಯುತ್ತಿದ್ದರೂ ತುಟಿಪಿಟಕ್ಕೆನ್ನುತ್ತಿಲ್ಲದ ಅಧಿಕಾರಿಗಳ ನಡೆಯನ್ನೇ ಸ್ಥಳೀಯ ಬಡ ಜನ ಶಂಕಿಸಿದ್ದು, ಇದೀಗ ಪ್ರಶ್ನೆ ಮಾಡುತ್ತಿದ್ದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಸಿದ್ದತೆ ನಡೆಸಿದ್ದಾರೆ.
ಮೆಲ್ಕಾರ್ ಆರ್ ಟಿ ಒ ಕಚೇರಿ ಬಳಿ ಇರುವ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಈ ಸ್ಫೋಟ ಕೃತ್ಯ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಯಾವುದೇ ಮುಂಜಾಗ್ರತೆ ಅಥವಾ ವೈಜ್ಞಾನಿಕ ಕ್ರಮ ಇಲ್ಲದೆ ಕಲ್ಲುಗಳನ್ನು ಸ್ಫೋಟಿಸುತ್ತಿರುವುದರಿಂದ ಸ್ಥಳೀಯವಾಗಿ ಹಲವು ಮನೆಗಳ ಗೋಡೆಗಳು, ನೆಲಗಳು ಹಾಗೂ ಸ್ಲ್ಯಾಬ್ ಗಳು ಬಿರುಕು ಬಿಟ್ಟಿದೆ. ಅಲ್ಲದೆ ಸ್ಫೋಟದ ಶಬ್ದ ಹಾಗೂ ಪರಿಸರ ಹಾನಿಕಾರಕ ವಸ್ತುಗಳಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳಲಾರಂಭಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಯಾವುದೇ ಇಲಾಖೆಯಿಂದ ಪರವಾನಿಗೆ ಇಲ್ಲದೆ ಅವೈಜ್ಞಾನಿಕವಾಗಿ ಇಲ್ಲಿ ನಡೆಯುತ್ತಿರುವ ಭಾರೀ ಪ್ರಮಾಣದ ಸ್ಫೋಟದ ಬಗ್ಗೆ ಸ್ಥಳೀಯರು ಸ್ಥಳೀಯಾಡಳಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎನ್ನುವ ಸ್ಥಳೀಯರು ಸ್ಫೋಟ ನಡೆಸುವ ಮಂದಿಯಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಹಾಗೂ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರಲ್ಲದೆ ಧಮ್ಕಿ, ಬೆದರಿಕೆ ಹಾಕುತ್ತಿದ್ದು, ಇದೊಂದು ಮಾಫಿಯಾ ರೀತಿಯಲ್ಲಿ ನಡೆಯುತ್ತಿರುವುದರಿಂದ ಸ್ಥಳೀಯರಿಗೆ ಜೀವಭಯ, ಆತಂಕ ಆರಂಭವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ಎರಡು ವರ್ಷಗಳ ಮುಂಚೆ ಇದೇ ಪರಿಸರದಲ್ಲಿ ಇಂತಹದೇ ಕೃತ್ಯ ನಡೆಸಲಾಗಿದ್ದು, ಸ್ಥಳೀಯರ ಆಕ್ರೋಶದ ಬಳಿಕ ಅಧಿಕಾರಿಗಳು ಮಧ್ಯಪ್ರವೇಶಿಸಿ ಅದಕ್ಕೆ ಕಡಿವಾಣ ಹಾಕಿದ್ದರು.
ಈ ಬಗ್ಗೆ ತಕ್ಷಣ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಇಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಸ್ಫೋಟ ಕೃತ್ಯಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪರಿಸರವಾಸಿಗಳು ಆಗ್ರಹಿಸಿದ್ದಾರೆ.
0 comments:
Post a Comment