ಜಂ-ಇಯ್ಯತುಲ್ ಮಿಸ್ಬಾಹಿಲ್ ಹುದಾ (ರಿ) ಕಿಲ್ಲೂರು ಇದರ ವತಿಯಿಂದ ವಿವಿಧ ಆಧ್ಯಾತ್ಮಿಕ ಮಜ್ಲಿಸ್ ಹಾಗೂ 23ನೇ ವಾರ್ಷಿಕ ಮಹಾಸಭೆ
ಬಂಟ್ವಾಳ, ಜನವರಿ 10, 2024 (ಕರಾವಳಿ ಟೈಮ್ಸ್) : ಅರಿವುಳ್ಳವರು ಹಾಗೂ ಧಾರ್ಮಿಕ ಪಂಡಿತರು ಆತ್ಮ ಸಂಶುದ್ದತೆ ಹಾಗೂ ಜೀವನದಲ್ಲಿ ಯಾವುದೇ ಪ್ರಮಾದಗಳು ಬರದ ರೀತಿಯಲ್ಲಿ ಪರಿಶುದ್ದತೆ ಮೈಗೂಡಿಸಿಕೊಂಡಾಗ ತಾವು ಇತರರಿಗೆ ಹೇಳುವ ಉಪನ್ಯಾಸಗಳು ಫಲಪ್ರದವಾಗಿ ಅವರೂ ಕೂಡಾ ಉತ್ತಮ ಹಾದಿಯನ್ನು ಕಂಡುಕೊಳ್ಳಲು ನೆರವಾಗುತ್ತದೆ ಎಂದು ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ಹೇಳಿದರು.
ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಅಲ್ ಹಾಜ್ ಶೈಖುನಾ ಬಿ ಎಚ್ ಅಬೂಸ್ವಾಲಿಹ್ ಉಸ್ತಾದರ ಶಿಷ್ಯಂದಿರ ಸಂಘಟನೆ ಜಂ-ಇಯ್ಯತುಲ್ ಮಿಸ್ಬಾಹಿಲ್ ಹುದಾ (ರಿ) ಕಿಲ್ಲೂರು ಇದರ ವತಿಯಿಂದ ಕಿಲ್ಲೂರು ದಾರುಶ್ಶರೀಫ್ ಇಲ್ಲಿನ ಮರ್‍ಹೂಂ ಹಾಜಿ ಅಬ್ದುಲ್ ಖಾದಿರ್ ಮುಸ್ಲಿಯಾರ್ ವೇದಿಕೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ವಿವಿಧ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮಗಳ ಭಾಗವಾಗಿ ಜಲಾಲಿಯ್ಯ ರಾತೀಬ್ ಮಜ್ಲಿಸಿನ ನೇತೃತ್ವ ವಹಿಸಿ ಮಾತನಾಡಿದ ಅವರು ಆತ್ಮ ಸಂಶುದ್ದತೆ ಹಾಗೂ ಜೀವನ ಪರಿಶುದ್ದತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಜೀವಿಸುವಾಗ ಬಹಳಷ್ಟು ಸೂಕ್ಷ್ಮತೆ ಪಾಲಿಸಬೇಕಾಗುತ್ತದೆ. ಇಂತಹ ಜೀವನ ಸಾಗಿಸುವಾಗ ಹಲವು ಏಳು-ಬೀಳುಗಳನ್ನು ಕಾಣಬೇಕಾಗುತ್ತದೆ. ಕಷ್ಟ-ಸಂಕಷ್ಟಗಳು, ಕಾಠಿಣ್ಯಗಳನ್ನು ಅನುಭವಿಸಬೇಕಾಗಿ ಬರಬಹುದು. ಆತ್ಮವನ್ನು ನಿಯಂತ್ರಿಸಿ ಜೀವಿಸಲು ಅಲ್ಲಾಹನ ನಾಮಸ್ಮರಣೆಗಳು ನಿತ್ಯ ಜೀವನದಲ್ಲಿ ಸದಾ ಮೇಳೈಸಬೇಕು ಎಂದರು.
ಬೆಳಿಗ್ಗೆ ನಡೆದ ಖತ್‍ಮುಲ್ ಕುರ್ ಆನ್ ಹಾಗೂ ದುವಾ ನೇತೃತ್ವವನ್ನು ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಅವರು ವಹಿಸಿದ್ದರು. ಆಲಡ್ಕ ಮುದರ್ರಿಸ್ ಶೈಖುನಾ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ, ಅಬ್ಬಾಸ್ ಸಅದಿ (ಪೆರ್ನೆ ಉಸ್ತಾದ್), ಎಸ್ ಜೆ ಯು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕಾಸಿಂ ಮದನಿ ಕರಾಯ, ಕಿಲ್ಲೂರು ಮಸೀದಿ ಖತೀಬ್ ಉಮರ್ ಅಶ್ರಫಿ, ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್ ಮೋನಾಕ, ಕಾಜೂರು ಮಸೀದಿ ಅಧ್ಯಕ್ಷ ಕೆ ಯು ಇಬ್ರಾಹಿಂ ಮೊದಲಾದವರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಅಜಿಲಮೊಗರು ಸಯ್ಯಿದುಲ್ ಬಶರ್ ಬುರ್‍ದಾ ಸಂಘ ಹಾಗೂ ಆಲಡ್ಕ-ಪಾಣೆಮಂಗಳೂರು ಆಶಿಕುರ್ರಸೂಲ್ ಬುರ್‍ದಾ ಸಂಘದ ಸದಸ್ಯರಿಂದ ಬುರ್‍ದಾ ಆಲಾಪನೆ ನಡೆಯಿತು.
ಜಂ-ಇಯ್ಯತು ಮಿಸ್ಬಾಹಿಲ್ ಹುದಾ ಅಧ್ಯಕ್ಷ ಹಾಜಿ ಎನ್ ಎಚ್ ಆದಂ ಫೈಝಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಪಿ ಎಸ್ ತ್ವಾಹಾ ಸಅದಿ ಸ್ವಾಗತಿಸಿ, ಅಬ್ದುಲ್ ಖಾದರ್ ಮದನಿ ವಂದಿಸಿದರು. ಬಳಿಕ ಕಿಲ್ಲೂರು ಜಂ-ಇಯ್ಯತು ಮಿಸ್ಬಾಹಿಲ್ ಹುದಾ ಸಂಘಟನೆಯ 23ನೇ ವಾರ್ಷಿಕ ಮಹಾಸಭೆ ನಡೆಯಿತು.
0 comments:
Post a Comment