ಹಝ್ರತ್ ಖ್ವಾಜಾ ಮುಯೀನುದ್ದೀನ್ ಚಿಸ್ತಿಯ್ಯಿಲ್ ಅಜ್ಮೀರಿ (ರ) ಅವರ ಅನುಸ್ಮರಣೆ ಪ್ರಯುಕ್ತ ಮೈಸೂರಿನಲ್ಲಿ “ಖ್ವಾಜಾ ಕೀ ಛಟ್ಟೀ”
ಮೈಸೂರು, ಜನವರಿ 18, 2024 (ಕರಾವಳಿ ಟೈಮ್ಸ್) : ಪೂರ್ವಿಕ ಮಹಾನುಭಾವರುಗಳು ಹಾಕಿಕೊಟ್ಟ ಹಾದಿಯಲ್ಲಿ ನಡೆದಾಗ, ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಿ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಾಗ ಜೀವನ ಧನ್ಯವಾಗುವುದರ ಜೊತೆಗೆ ಸಂತೋಷಭರಿತ ಜೀವನ ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ಮೈಸೂರು ಶ್ರೀ ಬಸವಧ್ಯಾನ ಮಂದಿರದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಿಲ್ ಸಿಲಾ-ಎ-ಚಿಶ್ತಿಯಾ ಅಝೀಮಿಯಾ ಮೈಸೂರು ಇದರ ಆಶ್ರಯದಲ್ಲಿ ಜಗತ್ತಿನ ಶಾಂತಿ ಹಾಗೂ ಸಮೃದ್ದಿಗಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ಹಝ್ರತ್ ಖ್ವಾಜಾ ಮುಯೀನುದ್ದೀನ್ ಚಿಸ್ತಿಯ್ಯಿಲ್ ಅಜ್ಮೀರಿ (ರ) ಅವರ ಅನುಸ್ಮರಣೆ ಪ್ರಯುಕ್ತ ಗುರುವಾರ ಇಲ್ಲಿನ ಗೌಸಿಯಾ ನಗರದ ಎ ಬ್ಲಾಕ್, ಟಿ ಸಿ ಗಲ್ಲಿಯ ಆಸ್ತಾನೆ ಖ್ವಾಜಾ ಇಲ್ಲಿ ನಡೆದ “ಖ್ವಾಜಾ ಕೀ ಛಟ್ಟಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರೇಮ, ಪ್ರೀತಿ, ಮಾನವೀಯತೆ, ಸೌಹಾರ್ದತೆ, ಸಹೋದರತೆ, ಭ್ರಾತೃತ್ವ ಇವುಗಳನ್ನು ಜಗತ್ತಿನಲ್ಲಿ ಪಸರಿಸಿದವರು ಸೂಫಿ ಪರಂಪರೆಯ ಸಂತರಾಗಿದ್ದಾರೆ. ಅದನ್ನು ಮೈಗೂಡಿಸಿ ಜೀವಿಸಿದಾಗ ಜಗತ್ತಿನಲ್ಲಿ ಶಾಂತಿ ನೆಲೆನಿಲ್ಲಲು ಸಾಧ್ಯ ಎಂದರು.
ಖ್ವಾಜಾ ಗರೀಬ್ ನವಾಝ್ ಅವರು ಆಧ್ಯಾತ್ಮಿಕ ಪರಂಪರೆಯನ್ನು ಹುಟ್ಟು ಹಾಕಿ ಇಂದಿಗೂ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಇಂದು ಜಗತ್ತಿನಾದ್ಯಂತ ಅವರನ್ನು ಜನ ಸ್ಮರಿಸಿಕೊಳ್ಳುತ್ತಿರುವುದು ಅವರ ಆಧ್ಯಾತ್ಮಿಕ ಶಕ್ತಿಗಾಗಿ. ತನ್ನೊಳಗೇ ಇರುವ ದೇವರನ್ನು ಕಂಡುಕೊಂಡಾಗ ಜೀವನ ಧನ್ಯವಾಗುತ್ತದೆ ಎಂದು ಸೂಫಿಗಳು ಹಾಗೂ ಶರಣ ಸಂತರು ಸಾಧಿಸಿದ್ದಾರೆ ಎಂದವರು ಹೇಳಿದರು.
ಖ್ವಾಜಾ ಅಝೀಂ ಅಲಿ ಶಾ ಚಿಶ್ತೀ ಮೈಸೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಲ್ಹರಿ ಅಲಿ ಶಾ ಚಿಶ್ತಿ ದುವಾಶಿರ್ವಚನಗೈದರು. ಅಥಾವುಲ್ಲಾ ಮಸ್ತಾನಾ ಹಾಗೂ ಸಂಗಡಿಗರಿಂದ ಖವ್ವಾಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹಝ್ರತ್ ಶೈಖ್ ಝುಬೈರ್ ಷಾ ಚಿಶ್ತಿ ಉಲ್ ಖಾದ್ರಿ, ನಸ್ರುಲ್ಲಾ ಶಾ ಖಾದ್ರಿ ಚಿಶ್ತಿ, ಸಯ್ಯದ್ ನವೀದ್ ಷಾ ಖಾದ್ರಿ, ಮುನವ್ವರ್ ಶಾ ಜುನೈದಿ, ಸಯ್ಯದ್ ಎಹ್‍ಜಾಝ್ ಮಸ್ತಾನ್ ಶಾ ಖಾದ್ರಿ, ಖ್ವಾಜಾ ಮುಯೀನ್ ಅಲಿ ಶಾ ಚಿಶ್ತಿ, ಖ್ವಾಜಾ ಮೆಹರಾಜ್ ಅಲಿ ಶಾ ಚಿಶ್ತಿ, ಖ್ವಾಜಾ ಉರೂಜ್ ಅಲಿ ಶಾ ಚಿಶ್ತಿ, ಖ್ವಾಜಾ ಗೌಹರ್ ಅಲಿ ಶಾ ಚಿಶ್ತಿ, ಖ್ವಾಜಾ ಯೂಸುಫ್ ಅಲಿ ಶಾ ಚಿಶ್ತಿ, ಖ್ವಾಜಾ ಸರ್ಫಾರಾಜ್ ಅಲಿ ಶಾ ಚಿಶ್ತಿ, ಖ್ವಾಜಾ ಫರ್ಮಾನ್ ಅಲಿ ಶಾ ಚಿಶ್ತಿ, ಅಬ್ದುಲ್ ಖಾದರ್ ತಾಜ್ ನೆಲ್ಯಾಡಿ, ಅಬ್ದುಲ್ ಕರೀಂ ರೆಂಗೇಲು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment