ಬಂಟ್ವಾಳ, ಜನವರಿ 19, 2024 (ಕರಾವಳಿ ಟೈಮ್ಸ್) : ಮೈಸೂರು-ಉಡುಪಿ ಮಾರ್ಗವಾಗಿ ಸಂಚರಿಸುವ ಕೆ ಎಸ್ ಆರ್ ಟಿ ಸಿ ರಾಜಹಂಸ ಬಸ್ಸಿನ ನಿರ್ವಾಹಕ ಪ್ರಯಾಣಿಕರೊಂದಿಗೆ ಉಡಾಫೆ ವರ್ತಿಸಿದ್ದು ಮಾತ್ರವಲ್ಲ ಪ್ರಯಾಣಿಕರ ಆಸನದಲ್ಲೇ ಕೈಕಾಲು ಬಿಟ್ಟು ಮಲಗಿ ಕಿರಿ ಕಿರಿ ಉಂಟು ಮಾಡಿದ ಘಟನೆ ಗುರುವಾರ (ಜನವರಿ 18) ರಾತ್ರಿ ನಡೆದಿದ್ದು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಗುರುವಾರ ರಾತ್ರಿ ಮೈಸೂರಿನಿಂದ ಹೊರಟ ಮೈಸೂರು ವಿಭಾಗದ 3ನೇ ಘಟಕದ ಕಾರ್ಯಾಚರಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ರಾಜಹಂಸ ಬಸ್ಸಿನಲ್ಲಿ ಬಿ ಸಿ ರೋಡಿಗೆ ಹೊರಟ ಪ್ರಯಾಣಿಕರೋರ್ವರು ತಮ್ಮ ಅಸಮಾಧಾನವನ್ನು ತೋರಿಕೊಂಡಿದ್ದಾರೆ. ಗುರುವಾರ ರಾತ್ರಿ ಮೈಸೂರಿನಿಂದ ಬಸ್ಸಿಗೆ ಹತ್ತಿದ ಪ್ರಯಾಣಿಕ ಮೆಲ್ಕಾರ್ ನಿಲುಗಡೆಯ ಕೋರಿಕೆ ವ್ಯಕ್ತಪಡಿಸಿದ್ದು, ಇದಕ್ಕೆ ನಿರ್ವಾಹಕ ಒಪ್ಪಿಗೆ ಸೂಚಿಸಿದ ಬಳಿಕ ಟಿಕೆಟ್ ಖರೀದಿ ಪ್ರಯಾಣ ಬೆಳೆಸಿದ್ದಾರೆ. ಬಸ್ಸು ಮೈಸೂರು ಪಟ್ಟಣದಿಂದ ಹೊರ ಬರುತ್ತಿದ್ದಂತೆ ಟಿಕೆಟ್ ಕಾರ್ಯನಿರ್ವಹಣೆ ಮುಗಿಸಿದ ನಿರ್ವಾಹಕ ನೇರವಾಗಿ ಬಸ್ಸಿನ ಕೊನೆಯ ಪ್ರಯಾಣಿಕರ ಆಸನದತ್ತ ಬಂದು ಪ್ರಯಾಣಿಕರನ್ನು ಎಬ್ಬಿಸಿ ಕೈಕಾಲು ಬಿಟ್ಟು ಮಲಗಿಕೊಂಡಿದ್ದಾರೆ. ಈ ಬಗ್ಗೆ ಪ್ರಯಾಣಿಕರು ತಮಗಾಗುತ್ತಿದ್ದ ಕಿರಿ ಕಿರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ನಾವು ನಿರ್ವಾಹಕ ಕಾರ್ಯದ ಜೊತೆಗೆ ಚಾಲಕ ಕಾರ್ಯವನ್ನೂ ನಿರ್ವಹಿಸುತ್ತಿದ್ದು, ನಮಗೆ ಬಸ್ಸಿನಲ್ಲೇ ಮಲಗುವ ಹಕ್ಕಿದೆ ಎಂದು ವಾದ ಮಂಡಿಸಿದ್ದಾರೆ.
ಈ ಸಂದರ್ಭ ಪ್ರಯಾಣಿಕರು ತಮಗಾಗಿ ಮೀಸಲಿಟ್ಟ ಆಸನದಲ್ಲಿ ಕುಳಿತುಕೊಂಡು ಪ್ರಯಾಣಿಸಿ, ಪ್ರಯಾಣಿಕರಿಗೆ ಸುಲಲಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಿ ಎಂದು ಕೋರಿಕೊಂಡರೂ ನಮಗೆ ಮೀಸಲು ಆಸನ ಮಾತ್ರವಲ್ಲ ಎಲ್ಲಿಯೂ ಮಲಗುವ ಅವಕಾಶವಿದೆ. ಈ ಬಗ್ಗೆ ಪ್ರಯಾಣಿಕರು ಪ್ರಶ್ನಿಸುವಂತಿಲ್ಲ ಎಂದು ಉಡಾಫೆ ಹಾಗೂ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ.
ನಿರ್ವಾಹಕ ಕೊನೆ ಸೀಟಿನಲ್ಲಿ ಕಾಲು ಬಿಟ್ಟು ಮಲಗಿದ್ದರಿಂದ ಅವರ ಕಾಲಿಗೆ ಧರಿಸಿದ್ದ ಸಾಕ್ಸ್ ದುರ್ವಾಸನೆ ಬೀರುತ್ತಿದ್ದುದರಿಂದ ಪ್ರಯಾಣಿಕರಿಗೆ ತೀವ್ರ ಕೆಟ್ಟ ವಾಸನೆ ಬಂದಿದ್ದು, ಕುಳಿತು ಪ್ರಯಾಣಿಸಲು ಸಾಧ್ಯವಾಗದ ಪರಿಸ್ಥಿತಿಯ ಬಗ್ಗೆ ನಿರ್ವಾಹನ ಜೊತೆ ಹೇಳಿಕೊಂಡರೂ ಆತ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ನಿರ್ವಾಹವಿಲ್ಲದೆ ಪ್ರಯಾಣಿಕರು ಉಸಿರುಗಟ್ಟಿದ ಪರಿಸ್ಥಿತಿಯಲ್ಲಿ ಪ್ರಯಾಣ ಮುಂದುವರಿಸುವ ಅನಿವಾರ್ಯತೆ ಎದುರಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ಹೇಳಿಕೊಂಡಿದ್ದಾರೆ.
ಮೈಸೂರಿನಿಂದ ಬಸ್ಸು ಮೆಲ್ಕಾರ್ ತಲುಪುತ್ತಿದ್ದಂತೆ ನಿಲುಗಡೆ ಕೋರಿದ ಪ್ರಯಾಣಿಕರಿಗೆ ಅದಕ್ಕೂ ಅವಕಾಶ ನೀಡದ ನಿರ್ವಾಹಕ ಈ ಸಂದರ್ಭದಲ್ಲೂ ತೀವ್ರ ಉಡಾಫೆ ಮಾತುಗಳನ್ನೇ ಆಡಿದ್ದು, ಎಲ್ಲ ರೀತಿಯಲ್ಲೂ ಪ್ರಯಾಣಿಕರ ತಾಳ್ಮೆ ಪರೀಕ್ಷಿಸಿದ ಇಂತಹ ನಿರ್ವಾಹಕನ ವಿರುದ್ದ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಹಾಗೂ ಸಾರಿಗೆ ಮಂತ್ರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಬಸ್ಸಿನ ನಿರ್ವಾಹಕನ ಈ ರೀತಿಯ ಅಸಹ್ಯ ವರ್ತನೆಯ ಬಗ್ಗೆ ಸಂಬಂಧಪಟ್ಟವರೊಂದಿಗೆ ದೂರಿಕೊಳ್ಳುವ ಎಂದುಕೊಂಡಾಗ ಬಸ್ಸಿನ ಒಳಗಡೆ ಎಲ್ಲೂ ಕೆ ಎಸ್ ಆರ್ ಟಿ ಸಿ ಇಲಾಖಾಧಿಕಾರಿಗಳ ಅಥವಾ ಗ್ರಾಹಕ ಉಪಯೋಗಿ ದೂರವಾಣಿ ಸಂಖ್ಯೆಗಳನ್ನು ನಮೂದಿಸಿರುವುದು ಕೂಡಾ ಕಂಡು ಬಂದಿಲ್ಲ. ಈ ಹಿನ್ನಲೆಯಲ್ಲಿ ಪ್ರಯಾಣಿಕರು ತಮ್ಮ ಮನಸ್ಸಿನ ಅಸಮಾಧಾನವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.
0 comments:
Post a Comment