ಜನವರಿ 10 ರಿಂದ ಫೆಬ್ರವರಿ 10ರವರೆಗೆ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ, ಈ ಬಾರಿ ಅರ್ಜಿ ಸಲ್ಲಿಕೆ ಸಂದರ್ಭದಲ್ಲೇ ಪರಿಶೀಲನೆ ವ್ಯವಸ್ಥೆ ಜಾರಿ, ಮೊಬೈಲ್ ಆಪ್ ಮೂಲಕ ವಾಟ್ಸಪ್ ಸಂದೇಶದ ಅಲರ್ಟ್
ಬೆಂಗಳೂರು, ಜನವರಿ 10, 2024 (ಕರಾವಳಿ ಟೈಮ್ಸ್) : ಎಪ್ರಿಲ್ 20 ರಿಂದ 22ವರೆಗೆ ನಿಗದಿಯಾಗಿದ್ದ ಸಿಇಟಿ ಪರೀಕ್ಷಾ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬದಲಿಸಿ ಮರುನಿಗದಿಪಡಿಸಿದ್ದು, ಎಪ್ರಿಲ್ 18 ರಿಂದ 20ರವರೆಗೆ ಪರೀಕ್ಷೆ ನಡೆಯಲಿದೆ.
ಎಪ್ರಿಲ್ 20 ರಿಂದ 22ರ ವರೆಗೆ ನಡೆಯಬೇಕಾಗಿದ್ದ ಸಿಇಟಿ ಪರೀಕ್ಷೆಯನ್ನು ಎಪ್ರಿಲ್ 18, 19 ಹಾಗೂ 20ಕ್ಕೆ ಮರು ನಿಗದಿ ಮಾಡಲಾಗಿದೆ. ಎಪ್ರಿಲ್ 21 ರಂದು ಎನ್‍ಡಿಎ (ನ್ಯಾಷನಲ್ ಡಿಫೆನ್ಸ್ ಎಕಾಡೆಮಿ) ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.
ಸಿಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಈ ಬಾರಿ ಅರ್ಜಿ ಸಲ್ಲಿಕೆ ಸಂದರ್ಭದಲ್ಲೇ ಪರಿಶೀಲನೆ ವ್ಯವಸ್ಥೆಯೂ ಜಾರಿ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಸಂದೇಶ ನೀಡಲು ಮೊಬೈಲ್ ಆಪ್ ಕೂಡಾ ಸಿದ್ದಪಡಿಸಲಾಗಿದೆ ಎಂದು ಕೆಇಎ ನಿರ್ದೇಶಕಿ ಎಸ್ ರಮ್ಯಾ ಅವರು ತಿಳಿಸಿದ್ದಾರೆ.
ಮೆಡಿಕಲ್/ ಡೆಂಟಲ್/ ಆಯುಷ್/ ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಸೇರಲು ಆಸಕ್ತಿ ಇರುವ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಯುಜಿನೀಟ್-2024 ಫಲಿತಾಂಶಗಳ ಪ್ರಕಟಣೆಯ ನಂತರ ಕೆಇಎನಲ್ಲಿ ನೋಂದಾಯಿಸಲಾಗಿರುವ ಅಭ್ಯರ್ಥಿಗಳಿಗೆ ನೀಟ್ ಸ್ಕೋರ್ ಮತ್ತು ರೋಲ್ ನಂಬರ್ ದಾಖಲಿಸಲು ಇಂಟರ್‍ಫೇಸ್ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಸಿಇಟಿ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಭಾಗವಾಗಿ ಈ ಬಾರಿ ಅರ್ಜಿಯನ್ನು ‘ಅರ್ಜಿ ಹಾಗೂ ಪರಿಶೀಲನೆ’ ನಮೂನೆಯಲ್ಲಿ ಹೊರತರಲಾಗಿದೆ. ಇದರಿಂದಾಗಿ, ಅಭ್ಯರ್ಥಿಗಳ ದಾಖಲಾತಿಗಳನ್ನು ಭೌತಿಕವಾಗಿ ಪರಿಶೀಲಿಸಲು ಈ ಮುಂಚೆ ಹಿಡಿಯುತ್ತಿದ್ದ ಹೆಚ್ಚಿನ ಸಮಯ ಉಳಿತಾಯವಾಗುತ್ತದೆ ಎಂದು ಕೆಇಎ ವಿವರಿಸಿದೆ.
ಹೊಸ ಮಾದರಿಯಲ್ಲಿ, ಅಭ್ಯರ್ಥಿಗಳ ವಿವರಗಳನ್ನು, ಅಂದರೆ, ಶಾಲೆಗಳ ವ್ಯಾಸಂಗ, ಕನ್ನಡ ಮಾಧ್ಯಮ, ಜಾತಿ, ಆದಾಯ ಮುಂತಾದ ವಿವರಗಳನ್ನು ಎಸ್ ಎ ಟಿ ಹಾಗೂ ಕಂದಾಯ ಇಲಾಖೆಯ ವೆಬ್ ಸರ್ವಿಸ್ ಮುಖಾಂತರ ಆನ್ ಲೈನ್ ಮೂಲಕವೇ ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಪ್ರತ್ಯೇಕವಾಗಿ ದಾಖಲೆಗಳ ಪರಿಶೀಲನೆಗೆ ಭೌತಿಕವಾಗಿ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಪ್ರತಿ ವರ್ಷವೂ ಸುಮಾರು ಒಂದೂವರೆ ತಿಂಗಳ ಕಾಲ ನಡೆಯುತ್ತಿದ್ದ ಪರಿಶೀಲನೆಗಳ ಕಾರ್ಯಗಳು ಈಗ ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ನಡೆಯಲಿವೆ ಎಂದು ತಿಳಿಸಲಾಗಿದೆ. ಹೀಗಾಗಿ, ಅಭ್ಯರ್ಥಿಗಳು ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಎಚ್ಚರಿಕೆಯಿಂದ ಭರ್ತಿ ಮಾಡಲು ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಸೂಚಿಸಲಾಗಿದೆ.
ಪ್ರಾಧಿಕಾರವು ಸುಮಾರು 250ಕ್ಕೂ ಹೆಚ್ಚು ನುರಿತ ಉಪನ್ಯಾಸಕರನ್ನು ಮಾಸ್ಟರ್ ಟ್ರೈನರ್ ಎಂದು ಗುರುತಿಸಿ ಅವರಿಗೆ ಅರ್ಜಿ ಸಲ್ಲಿಸುವ ಬಗ್ಗೆ ತರಬೇತಿಯನ್ನು ಈಗಾಗಲೇ ನೀಡಿದೆ. ಈ ಮಾಸ್ಟರ್ ಟ್ರೈನರ್‍ಗಳು, ಪ್ರತಿ ವಿಜ್ಞಾನ ಕಾಲೇಜಿನಲ್ಲಿ ಒಂದಿಬ್ಬರು ಉಪನ್ಯಾಸಕರನ್ನು ಗುರುತಿಸಿ ಅವರಿಗೆ ‘ಕಾಲೇಜು ಟ್ರೈನರ್’ ತರಬೇತಿ ನೀಡಿ ಸಜ್ಜುಗೊಳಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಬಗ್ಗೆ ಸಂದೇಹಗಳಿದ್ದಲ್ಲಿ ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲಿನ ಕಾಲೇಜು ಟ್ರೈನರ್‍ಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬೇಕು ಎಂದು ಸೂಚಿಸಲಾಗಿದೆ.
ಇದರ ಜೊತೆಗೆ, ಸುಧಾರಣೆಯ ಮತ್ತೊಂದು ಕ್ರಮವಾಗಿ ಕೆಇಎ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ಇದನ್ನು ಕೆಇಎ ವೆಬ್‍ಸೈಟಿನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದರಿಂದಾಗಿ ಪರೀಕ್ಷಾ ವೇಳಾಪಟ್ಟಿ, ಸೂಚನೆ, ಅರ್ಜಿ ಪ್ರಕ್ರಿಯೆ ಯಾವ ಹಂತದಲ್ಲಿದೆ ಇತ್ಯಾದಿ ಮಾಹಿತಿಯನ್ನು ವಾಟ್ಸಪ್ ಮೆಸೇಜ್ ಮೂಲಕವೇ ಪಡೆಯಬಹುದು. ಇದು, ಅಭ್ಯರ್ಥಿಗಳು ಪದೇಪದೇ ವೆಬ್‍ಸೈಟಿಗೆ ಹೋಗಿ ಪರಿಶೀಲಿಸಬೇಕಾದ ಅಗತ್ಯವನ್ನು ತಪ್ಪಿಸುತ್ತದೆ. ಶುಲ್ಕ ಪಾವತಿ ಹಾಗೂ ಅರ್ಜಿಗೆ ಸಂಬಂಧಿಸಿದ ವಿವರಗಳು ಅಭ್ಯರ್ಥಿಗಳ ಪೆÇೀರ್ಟಲ್‍ನಲ್ಲಿ (ಕ್ಯಾಂಡಿಡೇಟ್ ಪೆÇೀರ್ಟಲ್) ಲಭ್ಯವಿರುತ್ತದೆ ಎಂದು ಕೆಇಎ ತಿಳಿಸಿದೆ
0 comments:
Post a Comment