ಗುಡ್ಡೆಅಂಗಡಿ ಹಝ್ರತ್ ಶೈಖ್ ಮೌಲವಿ (ಖಸಿ) 43ನೇ ಉರೂಸ್ ಸಮಾರೋಪ
ಬಂಟ್ವಾಳ, ಜನವರಿ 07, 2024 (ಕರಾವಳಿ ಟೈಮ್ಸ್) : ಧರ್ಮ-ಜಾತಿ ಹೆಸರಲ್ಲಿ ಯಾವುದೇ ಸಂಘರ್ಷ ನಡೆಸದೆ ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ಪ್ರೀತಿಯಿಂದ ಜೀವಿಸಿದಾಗ ಸಮಾಜದಲ್ಲಿ ಸೌಹಾರ್ದತೆ ನೆಲೆನಿಲ್ಲುವುದರ ಜೊತೆಗೆ ಜೀವನವೂ ಧನ್ಯಗೊಳ್ಳುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹೇಳಿದರು.
ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಸಮೀಪ ಅಂತ್ಯವಿಶ್ರಮಗೊಳ್ಳುತ್ತಿರುವ ಹಝ್ರತ್ ಶೈಖ್ ಮೌಲವಿ (ಖಸಿ) ಅವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 43ನೇ ವರ್ಷದ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಶನಿವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವರೊಬ್ಬನೇ ನಾಮ ಮಾತ್ರ ಹಲವಿದೆ. ಎಲ್ಲರೂ ನಂಬುವುದು ಅಗೋಚರ ಶಕ್ತಿಯನ್ನೇ. ವಿವಿಧ ಧರ್ಮೀಯರು ವಿವಿಧ ನಾಮಗಳಲ್ಲಿ ದೇವರನ್ನು ಧ್ಯಾನಿಸುತ್ತಾರೆ. ಯಾರೂ ಕೂಡಾ ಇಂತಹದ್ದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ಎಲ್ಲವೂ ಆ ದೇವನ ಮಹಿಮೆ. ಹುಟ್ಟಿನಿಂದ ಪಡೆದ ಧರ್ಮವನ್ನು ಅನುಸರಿಸುವುದರ ಜೊತೆಗೆ ಸಹೋದರ ಧರ್ಮವನ್ನು ಗೌರವಿಸುವಂತಾಗಬೇಕು ಎಂದರು.
ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ರಹ್ಮಾನಿ ಚೌಕಿ ಮುಖ್ಯ ಭಾಷಣಗೈದರು. ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸೆದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್, ಲೋಲಾಕ್ಷ ಶೆಟ್ಟಿ, ಸ್ಥಳೀಯ ಖತೀಬ್ ಕೆ ಪಿ ಹಸ್ವೀಫ್ ದಾರಿಮಿ ಕಾಜಿನಡ್ಕ ಮೊದಲಾದವರು ಭಾಗವಹಿಸಿದ್ದರು.
ಮದ್ರಸ ಅಧ್ಯಾಪಕರಾದ ಉಸ್ಮಾನ್ ಮುಸ್ಲಿಯಾರ್, ಇಸ್ಮಾಯಿಲ್ ಮುಸ್ಲಿಯಾರ್, ಬಾವಾ ಮುಸ್ಲಿಯಾರ್, ಅಬ್ದುಲ್ ನಾಸಿರ್ ಅಲ್-ಮದನಿü ಮೊದಲಾದವರು ಉಪಸ್ಥಿತರಿದ್ದರು.
ಸುಬ್‍ಹಿ ನಮಾಝ್ ಬಳಿಕ ಎ ಎ ಇಬ್ರಾಹಿಂ ಮುಸ್ಲಿಯಾರ್ ಬೋಗೋಡಿ ಅವರ ನೇತೃತ್ವದಲ್ಲಿ ಖತ್‍ಮುಲ್ ಕುರ್-ಆನ್ ಪಾರಾಯಣ ನಡೆಯಿತು. ಮಗ್ರಿಬ್ ನಮಾಝ್ ಬಳಿಕ ಸಯ್ಯಿದ್ ಹುಸೈನ್ ತಂಙಳ್ ಬಾ-ಅಲವಿ ಕುಕ್ಕಾಜೆ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು.
ಮಸೀದಿ ಗೌರವಾಧ್ಯಕ್ಷ ಹಾಜಿ ಬಿ ಎ ಮುಹಮ್ಮದ್ ನೀಮಾ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಎಸ್ ಎಂ ನಗರ ವಂದಿಸಿದರು. ಮದ್ರಸ ಮುಖ್ಯೋಪಾಧ್ಯಾಯ ರಶೀದ್ ಹನೀಫಿ ಕಾರ್ಯಕ್ರಮಮ ನಿರೂಪಿಸಿದರು.
0 comments:
Post a Comment