ಗುಡ್ಡೆಅಂಗಡಿ ಶೈಖ್ ಮೌಲವಿ (ಖ.ಸಿ.) 43ನೇ ಉರೂಸ್ ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ
ಬಂಟ್ವಾಳ, ಜನವರಿ 03, 2024 (ಕರಾವಳಿ ಟೈಮ್ಸ್) : ಅಲ್ಲಾಹನ ಸಾಮೀಪ್ಯ ಹೊಂದಿರುವ ಮಹಾನುಭಾವರುಗಳ ಮಾದರಿ ಜೀವನವನ್ನು ಸಮುದಾಯಕ್ಕೆ ತೋರಿಸಿಕೊಡುವ ನಿಟ್ಟಿನಲ್ಲಿ ಅನುಸ್ಮರಣೆ ಹಾಗೂ ಉರೂಸ್ ಕಾರ್ಯಕ್ರಮಗಳು ಅತ್ಯಂತ ಮಹತ್ವ ಪಡೆಯುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಉತ್ತಮ ಉದ್ದೇಶದೊಂದಿಗೆ ಸರ್ವರೂ ಪಾಲ್ಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.
ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಸಮೀಪ ಅಂತ್ಯವಿಶ್ರಮಗೊಳ್ಳುತ್ತಿರುವ ಹಝ್ರತ್ ಶೈಖ್ ಮೌಲವಿ (ಖಸಿ) ಅವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 43ನೇ ವರ್ಷದ ಉರೂಸ್ ಕಾರ್ಯಕ್ರಮಕ್ಕೆ ಬುಧವಾರ ರಾತ್ರಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿ ದುವಾಕ್ಕೆ ನೇತೃತ್ವ ನೀಡಿ ಮಾತನಾಡಿದ ಅವರು, ದರ್ಗಾಗಳಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಮಹಾತ್ಮರುಗಳ ಚರಿತ್ರೆಗಳನ್ನು ಸ್ಥಳೀಯರಿಗೆ ವಿವರಿಸುವ ಮೂಲಕ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು. ಆ ಮೂಲಕ ಸಮಾಜದಲ್ಲಿ ಸೌಹಾರ್ದತೆ ಮೂಡಿಸುವ ಕೆಲಸಗಳು ಧಾರ್ಮಿಕ ಕೇಂದ್ರಗಳ ಮೂಲಕ ಆಗಬೇಕು ಎಂದವರು ಇದೇ ವೇಳೆ ಕರೆ ನೀಡಿದರು.
ಗೌರವ ಅತಿಥಿಯಾಗಿದ್ದ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಮಾತನಾಡಿ, ಧಾರ್ಮಿಕ ಉಪನ್ಯಾಸಗಳು ಇಂದು ಧಾರಾಳವಾಗಿ ನಡೆಯುತ್ತಿದೆ. ಆದರೆ ಅವುಗಳು ಕೇವಲ ನೆಪಮಾತ್ರಕ್ಕೆ ನಡೆಯದೆ ಅವುಗಳ ಮೂಲಕ ಧಾರ್ಮಿಕ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಧನ್ಯಗೊಳಿಸುವಂತಾಗಬೇಕು ಎಂದರು.
ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಖತೀಬ್ ಕೆ ಪಿ ಹಸ್ವೀಫ್ ದಾರಿಮಿ ಕಾಜಿನಡ್ಕ ಮುಖ್ಯ ಭಾಷಣಗೈದರು. ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಎ ಎ ಇಬ್ರಾಹಿಂ ಮುಸ್ಲಿಯಾರ್ ಬೋಗೋಡಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಮಂಗಳೂರು ಝೀನತ್ ಬಕ್ಷ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಟ್ರಸ್ಟಿ ಅದ್ದು ಹಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮದ್ರಸ ಅಧ್ಯಾಪಕರಾದ ಉಸ್ಮಾನ್ ಮುಸ್ಲಿಯಾರ್, ಇಸ್ಮಾಯಿಲ್ ಮುಸ್ಲಿಯಾರ್, ಬಾವಾ ಮುಸ್ಲಿಯಾರ್, ಅಬ್ದುಲ್ ನಾಸಿರ್ ಅಲ್-ಮದನಿ ಮೊದಲಾದವರು ಉಪಸ್ಥಿತರಿದ್ದರು.
ಮಸೀದಿ ಗೌರವಾಧ್ಯಕ್ಷ ಹಾಜಿ ಬಿ ಎ ಮುಹಮ್ಮದ್ ನೀಮಾ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಎಸ್ ಎಂ ನಗರ ವಂದಿಸಿದರು. ಮದ್ರಸ ಮುಖ್ಯೋಪಾದ್ಯಾಯ ರಶೀದ್ ಹನೀಫಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment