ಜನರ ಬರಗಾಲದ ಹಾಹಾಕಾರಕ್ಕೆ ಸರಕಾರದ ಗ್ಯಾರಂಟಿ ಯೋಜನೆಗಳು ಶಕ್ತಿ ತುಂಬಿದೆ : ಸಿದ್ದರಾಮಯ್ಯ - Karavali Times ಜನರ ಬರಗಾಲದ ಹಾಹಾಕಾರಕ್ಕೆ ಸರಕಾರದ ಗ್ಯಾರಂಟಿ ಯೋಜನೆಗಳು ಶಕ್ತಿ ತುಂಬಿದೆ : ಸಿದ್ದರಾಮಯ್ಯ - Karavali Times

728x90

10 January 2024

ಜನರ ಬರಗಾಲದ ಹಾಹಾಕಾರಕ್ಕೆ ಸರಕಾರದ ಗ್ಯಾರಂಟಿ ಯೋಜನೆಗಳು ಶಕ್ತಿ ತುಂಬಿದೆ : ಸಿದ್ದರಾಮಯ್ಯ

ಗ್ಯಾರಂಟಿಗಳನ್ನು ಅಪಹಾಸ್ಯ, ಅವಹೇಳನ ಮಾಡಿದವರೇ ಇದೀಗ ಮೋದಿ ಗ್ಯಾರಂಟಿ ಎಂದು ಶುರುವಿಟ್ಟಿದ್ದಾರೆ : ಸಿಎಂ ಲೇವಡಿ


ಬೆಂಗಳೂರು, ಜನವರಿ 11, 2024 (ಕರಾವಳಿ ಟೈಮ್ಸ್) : ಗ್ಯಾರಂಟಿಗಳು ಜಾರಿಯಾಗಿರದಿದ್ದರೆ ಬರಗಾಲದ ಹಾಹಾಕಾರ ಎದ್ದಿರುತ್ತಿತ್ತು. ರಾಜ್ಯದ 223 ತಾಲೂಕುಗಳು ಬರಗಾಲ ಪೀಡಿತವಾಗಿದ್ದರೂ ಮೇವಿಗೆ, ಕುಡಿಯುವ ನೀರಿಗೆ, ಉದ್ಯೋಗ ಖಾತ್ರಿಗೆ ತೊಂದರೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತೋಷ ವ್ಯಕ್ತಪಡಿಸಿದ್ದಾರೆ. ನಾವು ಸತ್ಯ ಹೇಳಿ ಲಾಭವನ್ನು ಪಡೆಯುವ ಪ್ರಯತ್ನ ಮಾಡಬೇಕು. ಗ್ಯಾರಂಟಿಗಳನ್ನು ಅಪಹಾಸ್ಯ, ಅವಹೇಳನ ಮಾಡಿದವರೇ ಈಗ ಮೋದಿ ಗ್ಯಾರಂಟಿ ಎಂದು ಶುರು ಮಾಡಿದ್ದಾರೆ. ನಾವು ಜನರಿಗೆ ಸತ್ಯವನ್ನು ಹೇಳಬೇಕು. ಭಾರತದ ಇತಿಹಾಸದಲ್ಲಿ ಯಾವ ಸರಕಾರವೂ ಈ ರೀತಿಯ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ. ಇದರಿಂದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಲು ಸಾಧ್ಯವಾಗುತ್ತದೆ. ದಲಿತರು, ಹಿಂದುಳಿದವರು, ಮಹಿಳೆಯರಿಗೆ ಅನುಕೂಲವಾಗಲಿದೆ. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದಿದ್ದಾರೆ. 

ಸರಕಾರದಲ್ಲಿ ಹಣವಿಲ್ಲ ಎನ್ನುವ ಅಪಪ್ರಚಾರವನ್ನು ಸೋಲಿಸಬೇಕು. ಇಷ್ಟು ದೊಡ್ಡ ದೊಡ್ಡ ಕಾರ್ಯಕ್ರಮಗಳು  ಹಣವಿಲ್ಲದೆ ನಡೆಯಲು ಸಾಧ್ಯವೇ? ನಮ್ಮವರೇ ವಿರೋಧ ಪಕ್ಷಗಳ ಅಪಪ್ರಚಾರವನ್ನು ಸೋಲಿಸಲು ಮುಂದಾಗಬೇಕು. ಮಾರ್ಚ್ ಒಳಗೆ ಎಲ್ಲಾ ಶಾಸಕರಿಗೆ 25 ಕೋಟಿ ರೂಪಾಯಿಗಳ ಕೆಲಸ ನೀಡಲು ಸೂಚಿಸಿದ್ದೇನೆ ಎಂದ ಸಿದ್ದರಾಮಯ್ಯ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಾವು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ, ಈವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಭೆ ಕರೆದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ಭರವಸೆ ನೀಡಿದ್ದರು. ಕೇಂದ್ರ ಸರಕಾರ ಕೊಡುವವರೆಗೆ ಕಾಯಬಾರದು ಎಂದು 2000 ರೂಪಾಯಿವರೆಗೆ  ರೈತರಿಗೆ ಇನ್ ಪುಟ್ ಸಬ್ಸಿಡಿ ಪರಿಹಾರ ನೀಡಲು ಪ್ರಾರಂಭಿಸಲಾಗಿದೆ ಎಂದರು. 

ಬಿಜೆಪಿಯವರು ಬರಪರಿಹಾರ ಕೊಟ್ಟಿಲ್ಲ ಎಂದು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. 25 ಸಂಸದರು ರಾಜ್ಯದಿಂದ ಇದ್ದರೂ ಒಂದು ದಿನವೂ ಈ ಬಗ್ಗೆ ಮಾತನಾಡಿಲ್ಲ. 15ನೇ ಹಣಕಾಸಿನ ಆಯೋಗವು 14-15ನೇ ಸಾಲಿಗೆ 1.07% ಹಣ ಕಡಿಮೆ ಮಾಡಿದರು. 1 ಲಕ್ಷ  66 ಸಾವಿರ ಕೋಟಿ ರೂಪಾಯಿಗಳು ನಮಗೆ ಬರಬೇಕಿತ್ತು. 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5,495 ಕೋಟಿ ರೂಪಾಯಿಗಳನ್ನು ಕೊಡುವುದಾಗಿ ಹೇಳಿ ಕೊಟ್ಟಿಲ್ಲ. ಕರ್ನಾಟಕದ ಬಗ್ಗೆ ಇವರಿಗೆ ಕಾಳಜಿ ಇದೆಯೇ? ಎಂದು ಸಿಎಂ ಪ್ರಶ್ನಿಸಿದ್ದಾರೆ. 

2018-19 ರಲ್ಲಿ ಕೇಂದ್ರದ ಬಜೆಟ್ ಗಾತ್ರ 23 ಲಕ್ಷ ಕೋಟಿ ರೂಪಾಯಿಗಳಿತ್ತು. 35 ಸಾವಿರ ಕೋಟಿ ನಮ್ಮ ಪಾಲು ಇತ್ತು. ಈಗ 45 ಲಕ್ಷ ಕೋಟಿ ರೂಪಾಯಿಗಳಿದ್ದರೂ ನಮಗೆ ಬರುವುದು ಕೇವಲ 37 ಸಾವಿರ ಕೋಟಿ ರೂಪಾಯಿಗಳು. ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ. ಅವರು ಕೊಡುವುದು ನಮ್ಮ ತೆರಿಗೆಯ ಹಣವನ್ನೇ.

ಸೆಸ್, ಸರ್ಚಾರ್ಜ್ ನಲ್ಲಿ ನಮಗೆ ಪಾಲಿಲ್ಲ. 4 ಲಕ್ಷ ಕೋಟಿ ರೂಪಾಯಿಗಳನ್ನು ನಮ್ಮ ರಾಜ್ಯದಿಂದ ಸಂಗ್ರಹ ಮಾಡುತ್ತಾರೆ. 52 ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ಕೊಡುತ್ತಾರೆ. ಎಲ್ಲಾ ಶಾಸಕರು, ಸಂಸದರು ಇದನ್ನು ಹೇಳಬೇಕು. 

ಈ 10 ವರ್ಷಗಳಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ. ಜಿಎಸ್‍ಟಿ ಯಿಂದಾಗುವ  ನಷ್ಟವನ್ನು ಭರಿಸುವುದಾಗಿ ಹೇಳಿದ್ದರೂ, ನಮಗೆ ಹಣವನ್ನು ಕೊಟ್ಟಿಲ್ಲ. ರಾಜ್ಯದ  ಸಂಸದರೂ ತುಟಿಕ್ ಪಿಟಿಕ್ಕೆನ್ನದೇ ಇದ್ದಾರೆ. ಆರ್ಥಿಕವಾಗಿ ಸ್ವಲ್ಪ ಭಾರವಾದರೂ ಗ್ಯಾರಂಟಿಗಳು ಜನರಿಗೆ ಮುಂದಿನ ದಿನಗಳಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುತ್ತದೆ.

ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯಗಳ ಬಗ್ಗೆ ಶಾಸಕರಿಗೆ ಪಟ್ಟಿ ಕಳಿಸಿಕೊಟ್ಟು ಅದನ್ನು ಜನರಿಗೆ ತಲುಪಿಸಬೇಕು. ಜನರಿಗೆ ನಮ್ಮ ಗ್ಯಾರಂಟಿಗಳನ್ನು ತಲುಪಿಸಬೇಕು ಎಂದು ಸಿಎಂ ಸಿದ್ದರಾವiಯ್ಯ ಹೇಳಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜನರ ಬರಗಾಲದ ಹಾಹಾಕಾರಕ್ಕೆ ಸರಕಾರದ ಗ್ಯಾರಂಟಿ ಯೋಜನೆಗಳು ಶಕ್ತಿ ತುಂಬಿದೆ : ಸಿದ್ದರಾಮಯ್ಯ Rating: 5 Reviewed By: karavali Times
Scroll to Top