ಬಂಟ್ವಾಳ, ಜನವರಿ 29, 2024 (ಕರಾವಳಿ ಟೈಮ್ಸ್) : ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೋಳಿಯಾರು ಗ್ರಾಮದ ಅಮ್ಮೆಂಬಳ-ಜಾರದಗುಡ್ಡೆ ಎಂಬಲ್ಲಿ ಸೋಮವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಬೋಳಿಯಾರು ಗ್ರಾಮದ ಜಾರದಗುಡ್ಡೆ-ಅಮ್ಮೆಂಬಳ ನಿವಾಸಿ ದಿವಂಗತ ಇಬ್ರಾಹಿಂ (ಗುಜಿರಿ) ಎಂಬವರ ಪುತ್ರ ಮುಹಮ್ಮದ್ ಮುಸ್ತಫಾ (42) ಎಂದು ಹೆಸರಿಸಲಾಗಿದೆ. ತೆಂಗಿನ ಮರ ಏರುವುದು ಸಹಿತ ಸ್ಥಳೀಯವಾಗಿ ಕೂಲಿ ಕೆಲಸ ಮಾಡುವ ವೃತ್ತಿಯ ಮುಸ್ತಫಾ ಅವರು ಕಳೆದ 12 ದಿನಗಳ ಹಿಂದೆ ಮನೆ ಸಮೀಪದಲ್ಲಿ ತೋಟವೊಂದರ ತೆಂಗಿನ ಮರಕ್ಕೆ ಏರಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಕುತ್ತಿಗೆ, ಎದೆ, ಸೊಂಟ ಸಹಿತ ದೇಹದ ವಿವಿಧ ಭಾಗಗಳ ನರಕ್ಕೆ ಪೆಟ್ಟು ಬಿದ್ದು ಗಂಭೀರಾವಸ್ಥೆಯಲ್ಲಿ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಿಗೆ ಎರಡು-ಮೂರು ಶಸ್ತ್ರ ಚಿಕಿತ್ಸೆಯನ್ನೂ ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ವೇಳೆಗೆ ಅಮ್ಮೆಂಬಳ ಮಸೀದಿ ದಫನ ಭೂಮಿಯಲ್ಲಿ ದಫನ ಕ್ರಿಯೆ ನೆರವೇರಿಸಲಾಗಿದೆ.
ಮೃತರು ತಾಯಿ, ಪತ್ನಿ, ಓರ್ವ ಅಪ್ರಾಪ್ತ ಪುತ್ರ, ಮೂರು ಮಂದಿ ಅಪ್ರಾಪ್ತ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment