ಮಂಗಳೂರು, ಜನವರಿ 07, 2024 (ಕರಾವಳಿ ಟೈಮ್ಸ್) : ಶಾಲೆಗಳಲ್ಲಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸದಂತೆ ಶಿಕ್ಷಣ ಇಲಾಖೆ ನಿಯಮ ರೂಪಿಸಿರುವುದು ಸರಿಯಲ್ಲ, ಶಾಲೆಗಳಲ್ಲಿ ಮಕ್ಕಳು ಬಳಸುವ ಶೌಚಾಲಯಗಳನ್ನು ಮಕ್ಕಳೇ ಸ್ವಚ್ಚಗೊಳಿಸುವುದು ತಪ್ಪಲ್ಲ. ಈ ನಿಯಮದ ಕುರಿತು ಪರಿಶೀಲನೆ ನಡೆಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮೂಡಬಿದ್ರೆಯಲ್ಲಿ ಪತ್ರಕರ್ತರ ಮುಂದೆ ಹೇಳಿಕೆ ನೀಡಿರುವುದನ್ನು ಸಿಪಿಐ (ಎಂಎಲ್) ಲಿಬರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ಖಾದರ್ ಅವರ ಈ ಹೇಳಿಕೆಯು ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹಾಗೂ ಬಡವರ ಮಕ್ಕಳನ್ನು ಶಿಕ್ಷಣದಿಂದ ದೂರಮಾಡುವ ಹುನ್ನಾರವಾಗಿದೆ ಎಂದಿದೆ.
ಸರಕಾರಿ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹಾಗೂ ಬೇಕಾದ ಸಿಬ್ಬಂದಿಗಳನ್ನು ನೇಮಿಸುವುದು ಸರಕಾರದ ಕರ್ತವ್ಯವಾಗಿದ್ದು ಆ ಬಗ್ಗೆ ಯಾವುದೇ ರೀತಿಯ ಆಲೋಚನೆಗಳನ್ನು ಮಾಡದೇ ಈ ರೀತಿಯ ಹೇಳಿಕೆ ನೀಡಿರುವುದರ ಹಿಂದೆ ಅವರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಇರುವ ಕಾಳಜಿ ವ್ಯಕ್ತವಾಗುತ್ತದೆ, ಹಾಗೂ ಸರಕಾರಿ ಶಾಲೆಗಳ ಮೇಲೆ ಹಾಗೂ ಅಲ್ಲಿ ವಿಧ್ಯಾಭ್ಯಾಸ ಮಾಡುವ ಮಕ್ಕಳ ಮೇಲಿನ ತಾತ್ಸಾರ ಮನೋಭಾವನೆ ಎತ್ತಿ ತೋರುತ್ತಿದೆ.
ಸರಕಾರೀ ಶಾಲಾ ಕಾಲೇಜುಗಳಲ್ಲಿ ತರಗತಿ ಕೊಠಡಿಗಳು, ಗ್ರಂಥಾಲಯ, ಕುಡಿಯುವ ನೀರು, ಶೌಚಾಲಯಗಳಂತೆ ಶೈಕ್ಷಣಿಕ ಸಂಸ್ಥೆಯಲ್ಲಿ ಒದಗಿಸಬೇಕಾದ ವಿವಿಧ ಸೌಲಭ್ಯತೆಗಳಲ್ಲಿ ಅತಿ ಕೊರತೆಯಿದೆ. ಕರ್ನಾಟಕ ಉಚ್ಚ ನ್ಯಾಯಾಲಯವೂ ಇದನ್ನು ಗಮನಿಸಿದ್ದು, ರಾಜ್ಯದಾದ್ಯಂತ 464 ಶಾಲೆಗಳಲ್ಲಿ ಶೌಚಾಲಯಗಳು ಲಭ್ಯವಿರುವುದಿಲ್ಲ ಮತ್ತು ಸರಕಾರಿ ಶಾಲೆಗಳ ಪರಿಸ್ಥಿತಿಯು ಬಹಳ ಗಂಭೀರವಾಗಿದೆ ಎಂದು ಹೇಳಿದೆ. ಹೆಣ್ಣು ಮಕ್ಕಳು ಸರಕಾರೀ ಶಾಲೆಗಳಲ್ಲಿ ಶೌಚಾಲಯಕ್ಕೆ ಉಪಯೋಗಿಸಲು ಪಡುವ ಪಾಡು ಎಲ್ಲರಿಗೂ ತಿಳಿದಿರುವ ವಿಷಯ. ಸರಕಾರೀ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರವು ಆದ್ಯತೆ ನೀಡಬೇಕಾಗಿದೆ.
ಸರಕಾರೀ ಶಾಲಾ-ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ದಲಿತ, ಆದಿವಾಸಿ, ಬಹುಜನರ ಮಕ್ಕಳು. ಇವರಿಗೆ “ಶಿಕ್ಷೆ” ವಿಧಿಸುವ ನೆಪದಲ್ಲಿ ಅಥವಾ “ಔದ್ಯೋಗಿಕ ಶಿಕ್ಷಣ”ದ ನೆಪದಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಒತ್ತಾಯಿಸುವುದು ಅಪರಾಧವಾಗಿರುತ್ತದೆ. ನೂತನ ಶಿಕ್ಷಣ ನೀತಿ (ಎನ್ ಇ ಪಿ) ಯಲ್ಲಿ ಔದ್ಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ಜಾತಿ ಪದ್ಧತಿಗಳನ್ನು ಪುನರುಚ್ಚರಿಸುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ ಸಿಪಿಐ ಎಂಎಲ್ ಕಾಂಗ್ರೆಸ್ ಸರಕಾರವು ಎನ್ ಇ ಪಿ ಹಿಂಪಡೆಯುತ್ತೇವೆ ಎಂದು ಹೇಳಿದ್ದರೂ ಅದರ ಪಳೆಯುಳಿಕೆಗಳು ಈ ರೀತಿಯ ಹೇಳಿಕೆಯಿಂದ ವ್ಯಕ್ತವಾಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸ್ಪೀಕರ್ ಯು ಟಿ ಖಾದರ್ ಅವರಂತಹ ವ್ಯಕ್ತಿಗಳು ಇಂತಹ ಕೀಳು ಮಟ್ಟದ ಹೇಳಿಕೆ ನೀಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಸಿಪಿಐ ಎಂಎಲ್ ಜಿಲ್ಲಾ ಸಮಿತಿಯ ಕಾರ್ಯದರ್ಶಿ ರಾಮಣ್ಣ ವಿಟ್ಲ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment