ಬೆಳ್ತಂಗಡಿ, ಡಿಸೆಂಬರ್ 19, 2023 (ಕರಾವಳಿ ಟೈಮ್ಸ್) : ಪತಿಯೇ ಪತ್ನಿಗೆ ಹಲ್ಲಿನಿಂದ ಕಚ್ಚಿ ಹಲ್ಲೆ ನಡೆಸಿದ್ದಲ್ಲದೆ ಮಗಳಿಗೂ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಘಟನೆ ಶಿಶಿಲ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಹಲ್ಲೆಕೋರನಿಂದ ತಪ್ಪಿಸಿಕೊಂಡು ತೋಟದಲ್ಲಿ ಅಡಗಿಕೊಂಡಿದ್ದ ಗಾಯಾಳು ತಾಯಿ ಹಾಗೂ ಪುತ್ರಿ ಮಂಗಳವಾರ ಬೆಳಿಗ್ಗೆ ಸಾರ್ವಜನಿಕರ ಸಹಕಾರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಲ್ಲಿನ ನಿವಾಸಿ ಮೋಹಿನಿ (55) ಹಾಗೂ ಆಕೆಯ ಪುತ್ರಿ ಹಲ್ಲೆಗೆ ಒಳಗಾದ ತಾಯಿ ಮಗಳು. ಮೋಹಿನಿ ಅವರ ಪತಿ ಸುರೇಶ ಎಂಬಾತನೇ ಹಲ್ಲೆಗೈದ ಆರೋಪಿ.
ಆರೋಪಿ ಗಂಡ ಸುರೇಶ್ ಕಳೆದ ಹಲವು ಸಮಯಗಳಿಂದ ಪತ್ನಿಗೆ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದು, ಸೋಮವಾರ ರಾತ್ರಿ ಮನೆಗೆ ಬಂದು, ಮೋಹಿನಿ ಹಾಗೂ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾನೆ. ಬಳಿಕ ಪತ್ನಿಗೆ ಕೈಯಿಂದ ಹಾಗೂ ಹೆಲ್ಮೆಟಿನಿಂದ ಹಲ್ಲೆ ನಡೆಸಿ, ಹಲ್ಲಿನಿಂದ ಕಚ್ಚಿ ರಕ್ತಗಾಯಗೊಳಿಸಿರುತ್ತಾನೆ. ಮಗಳಿಗೂ ಹಲ್ಲೆ ನಡೆಸಿದ್ದು, ಈ ವೇಳೆ ಆಕೆ ಓಡಿ ತಪ್ಪಿಸಿಕೊಂಡಿರುತ್ತಾರೆ. ಮೋಹಿನಿ ಕೂಡಾ ಆರೋಪಿಯಿಂದ ತಪ್ಪಿಸಿಕೊಂಡು ತೋಟದಲ್ಲಿ ಕುಳಿತಿರುತ್ತಾರೆ.
ಮರು ದಿನ ಅಂದರೆ ಮಂಗಳವಾರ ಬೆಳಿಗ್ಗೆ ಸಾರ್ವಜನಿಕರ ಸಹಕಾರದಿಂದ, ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2023 ಕಲಂ 323, 324, 326, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ಕೈಗೊಂಡು ತಕ್ಷಣ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಪೆÇಲೀಸ್ ಠಾಣಾ ಪೊಲೀಸ್ ಅಧಿಕಾರಿಗಳಾದ ಅನಿಲ್ ಕುಮಾರ್ ಡಿ, ಸಮರ್ಥ ರವೀಂದ್ರ ಗಾಣಿಗೇರ ಹಾಗೂ ಸಿಬ್ಬಂದಿಗಳಾದ ಎಚ್ ಸಿ ಶಶಿಧರ, ಪಿ ಸಿ ಮಲ್ಲಿಕಾರ್ಜುನ ಅವರುಗಳ ತಂಡವು, ಬೆಳ್ತಂಗಡಿ ಶಿಶಿಲ ಎಂಬಲ್ಲಿ ಆರೋಪಿ ಬೆಳ್ತಂಗಡಿ ಶಿಶಿಲ ಗ್ರಾಮದ ಸುರೇಶ್ ಗೌಡ (56) ಎಂಬಾತನನ್ನು ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 comments:
Post a Comment