ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಲು ಎ.ಐ.ಎಸ್.ಎ ಆಗ್ರಹ
ಬೆಂಗಳೂರು, ಡಿಸೆಂಬರ್ 30, 2023 (ಕರಾವಳಿ ಟೈಮ್ಸ್) : ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಸೆಪ್ಟಿಕ್ ಟ್ಯಾಂಕ್ ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಮೂರು ಸಂಗತಿಗಳು ವರದಿಯಾಗಿವೆ. ಕೋಲಾರದ ಮಾಲೂರ್ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 4 ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವ ನೆಪದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ. ಬೆಂಗಳೂರಿನ ಆಂಧ್ರಳ್ಳಿಯ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯ ಸ್ವಚ್ಛಗೊಳಿಸುವ ದೃಶ್ಯಗಳು ಬಹಿರಂಗಗೊಂಡಿದ್ದು, ಅದೇ ರೀತಿಯಲ್ಲಿ ಶಿವಮೊಗ್ಗದ ಸರಕಾರಿ ಶಾಲೆಯಲ್ಲಿ ಸಹ ಘಟನೆ ನಡೆದಿರುತ್ತದೆ. ಶಾಲೆಗಳ ಪ್ರಾಂಶುಪಾಲರನ್ನು ಅಮಾನತುಗೊಳಿಸಿರಬಹುದು. ಆದರೆ, ಕರ್ನಾಟಕ ಸರಕಾರವು ಇಂತಹ ಅಮಾನವೀಯ ಘಟನೆಗಳು ಮರುಸಂಭವಿಸದಂತೆ ಯಾವ ಕ್ರಮ ವಹಿಸುವುದು ಎಂದು ಉತ್ತರಿಸಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘ (ಎ.ಐ.ಎಸ್.ಎ) ಆಗ್ರಹಿಸಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿದ್ಯಾರ್ಥಿ ಸಂಘಟನೆ, ಸರಕಾರಿ ಶಾಲಾ ಕಾಲೇಜುಗಳಲ್ಲಿ ತರಗತಿ ಕೊಠಡಿಗಳು, ಗ್ರಂಥಾಲಯ, ಕುಡಿಯುವ ನೀರು, ಶೌಚಾಲಯಗಳಂತೆ ಶೈಕ್ಷಣಿಕ ಸಂಸ್ಥೆಯಲ್ಲಿ ಒದಗಿಸಬೇಕಾದ ವಿವಿಧ ಸೌಲಭ್ಯಗಳಲ್ಲಿ ಅತಿ ಕೊರತೆಯಿದೆ. ಕರ್ನಾಟಕ ಉಚ್ಚ ನ್ಯಾಯಾಲಯವೂ ಇದನ್ನು ಗಮನಿಸುತ್ತಾ ರಾಜ್ಯಾದ್ಯಂತ 464 ಶಾಲೆಗಳಲ್ಲಿ ಶೌಚಾಲಯಗಳು ಲಭ್ಯವಿರುವುದಿಲ್ಲ ಮತ್ತು ಸರಕಾರಿ ಶಾಲೆಗಳ ಪರಿಸ್ಥಿತಿಯು ಬಹಳ ಗಂಭೀರವಾಗಿದೆ ಎಂದು ಹೇಳಿದೆ. ಹೆಣ್ಣು ಮಕ್ಕಳು ಸರಕಾರಿ ಶಾಲೆಗಳಲ್ಲಿ ಶೌಚಾಲಯ ಉಪಯೋಗಿಸಲು ಪಡುವ ಪಾಡು ಎಲ್ಲರಿಗೂ ತಿಳಿದಿರುವ ವಿಷಯ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರವು ಆದ್ಯತೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ.
ಸರಕಾರಿ ಶಾಲಾ-ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ದಲಿತ, ಆದಿವಾಸಿ, ಬಹುಜನರ ಮಕ್ಕಳು. ಇವರಿಗೆ “ಶಿಕ್ಷೆ” ವಿಧಿಸುವ ನೆಪದಲ್ಲಿ ಅಥವಾ “ಔದ್ಯೋಗಿಕ ಶಿಕ್ಷಣ”ದ ನೆಪದಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಒತ್ತಾಯಿಸುವುದು ಅಪರಾಧವಾಗಿರುತ್ತದೆ. ನೂತನ ಶಿಕ್ಷಣ ನೀತಿ (ಎನ್.ಇ.ಪಿ) ಯಲ್ಲಿ ಔದ್ಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ಜಾತಿ ಪದ್ಧತಿಗಳನ್ನು ಪುನರುಚ್ಚರಿಸುವ ಸಂಭವವಿದೆ ಎಂದು ಚಿಂತಕರು ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ಸರಕಾರವು ಎನ್.ಇ.ಪಿ ಹಿಂಪಡೆಯುತ್ತೇವೆ ಎಂದು ಹೇಳಿದ್ದರೂ ಸಹ, ಅದರ ಪಳೆಯುಳಿಕೆಗಳು ಈ ರೀತಿಯಲ್ಲಿ ಹೊರಬರುತ್ತಿದೆ.
ಮಾನ್ಯುಯಲ್ ಸ್ಕ್ಯಾವೆಂಜಿಂಗ್ ಮಾಡಿಸುವುದು ಅಪರಾಧವೆಂದು ಕಾನೂನು ಜಾರಿಯಲ್ಲಿದ್ದರೂ, ಅದನ್ನು ರದ್ದುಗೊಳಿಸುವಲ್ಲಿ ಯಾವ ಸರಕಾರವೂ ಮುಂದಾಗಿರುವುದಿಲ್ಲ. ಪ್ರತಿ ವರ್ಷ ಹಲವಾರು ದಲಿತರು ಈ ಕೆಲಸ ಮಾಡುತ್ತಾ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪೌರ ಕಾರ್ಮಿಕರು ತಮ್ಮ ಹಕ್ಕುಗಳಿಗೆ ಹೋರಾಟವನ್ನು ನಡೆಸುತ್ತಿದ್ದಾರೆ. ಅವರ ಮಕ್ಕಳೇ ಸರಕಾರಿ ಶಾಲೆಗಳಿಗೆ ಹೋಗುವವರು. ದಲಿತರ ಮಕ್ಕಳು ಪೆÇರಕೆ ಹಿಡಿಯಬಾರದೆಂದು ಹೋರಾಡುತ್ತಿದ್ದಾರೆ. ಜಾತಿ ವಿನಾಶದೆಡೆಗೆ ನಾವು ಹೆಜ್ಜೆ ಇಡಬೇಕೆ ಹೊರತು, ದಲಿತ, ಆದಿವಾಸಿ, ಬಹುಜನರ ಮಕ್ಕಳು ಜಾತಿ ವೃತ್ತಿಗಳಲ್ಲಿ ತೊಡಗುವಂತೆ ಉತ್ತೇಜಿಸುವುದಲ್ಲ ಎಂದು ಅಭಿಪ್ರಾಯಪಟ್ಟಿರುವ ಸಂಘಟನೆ ಕರ್ನಾಟಕ ಸರಕಾರವು ಈ ಕೂಡಲೇ ಸರಕಾರಿ ಶಾಲಾ ಕಾಲೇಜುಗಳಲ್ಲಿ ಶೌಚಾಲಯ, ಸೆಪ್ಟಿಕ್ ಟ್ಯಾಂಕ್, ಅಂಡರ್ ಗ್ರೌಂಡ್ ಡ್ರೈನೇಜ್ ಮತ್ತು ಇತ್ಯಾದಿಗಳನ್ನು ಸ್ವಚ್ಛಗೊಳಿಸಲು ಕಾರ್ಯ ಯೋಜನೆಯನ್ನು ತಯಾರಿಸಬೇಕು. ಶಾಲಾ ಮಕ್ಕಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಬಾರದೆಂದು ಆದೇಶ ಹೊರಡಿಸಿ, ಈ ಪದ್ಧತಿಗೆ ಕಡಿವಾಣವನ್ನು ಹಾಕಬೇಕು. ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಗಳಲ್ಲಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆ ಮಾಡಬೇಕು. ಜಾತಿ ವಿನಾಶಕ್ಕಾಗಿ ಕಾಂಗ್ರೆಸ್ ಸರಕಾರವು ಏನು ಕ್ರಮವಹಿಸಿದೆ ಎಂದು ಕರ್ನಾಟಕದ ಜನತೆಗೆ ಉತ್ತರ ನೀಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಸಂಘ (ಎ.ಐ.ಎಸ್.ಎ) ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
0 comments:
Post a Comment