ಬಂಟ್ವಾಳ, ಡಿಸೆಂಬರ್ 11, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಕೈಕಂಬ ಜಂಕ್ಷನ್ನಿನಲ್ಲಿ ಕೆಲವು ಅಂಗಡಿ-ಮಳಿಗೆಗಳಿಗೆ ನುಗ್ಗಿದ ಕಳ್ಳರು ಸರಣಿ ಕಳ್ಳತನ ನಡೆಸಿರುವ ಪ್ರಕರಣ ಶನಿವಾರ ರಾತ್ರಿ ನಡೆದಿದ್ದು, ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರಿ ಸಂಘದ ಕೈಕಂಬದಲ್ಲಿರುವ ಪ್ರಧಾನ ಕಚೇರಿಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಈ ಬಗ್ಗೆ ಸಂಘದ ಮೆಲ್ಕಾರ್ ಶಾಖಾ ವ್ಯವಸ್ಥಾಪಕ, ಬಿ ಕಸಬಾ ನಿವಾಸಿ ಸದಾಶಿವ ಕೆ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಕೈಕಂಬ ಪೊಳಲಿ ದ್ವಾರದ ಬಳಿ ಸಾಯಿ ಲೀಲಾ ಎಂಬ ಹೋಟೆಲಿಗೆ ನುಗ್ಗಿದ ಕಳ್ಳರು ಕ್ಯಾಶ್ ಡ್ರಾವರಿನಲ್ಲಿದ್ದ 15 ಸಾವಿರ ರೂಪಾಯಿ ನಗದು ಹಣವನ್ನು ಹಾಗೂ ಮೊಬೈಲ್ ಫೋನನ್ನು ಕಳವುಗೈದಿರುವುದಾಗಿ ಅಂಗಡಿ ಮಾಲಕ ಬಿ ಮೂಡ ನಿವಾಸಿ ಸದಾನಂದ ಬಿ ಬಂಗೇರಾ ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಕೈಕಂಬದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆರಾವೊ ಎಂಟರ್ ಪ್ರೈಸಸ್ ಎಂಬ ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಶ್ ಡ್ರಾವರಿನಲ್ಲಿದ್ದ 52 ಸಾವುರ ರೂಪಾಯಿ ಕಳವು ಮಾಡಿದ್ದು, ಅಂಗಡಿಯ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಾರೆ. ಈ ಬಗ್ಗೆ ಅಂಗಡಿ ಮಾಲಕ ಕುರಿಯಾಳ ಗ್ರಾಮದ ನಿವಾಸಿ ಕ್ಯಾಲ್ವಿನ್ ಸಂತೋಷ ಪೆರ್ನಾಂಡಿಸ್ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೂ ಅಲ್ಲದೆ ಇನ್ನೂ ಅನೇಕ ಅಂಗಡಿಗಳಿಗೆ ನುಗ್ಗಿದ ಕಳ್ಳರು ಸರಣಿ ಕಳ್ಳತನಗೈದಿರುವುದು ವರದಿಯಾಗಿದೆ. ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಬಳಿಕ ಹೆಲ್ಮೆಟ್ ಧರಿಸಿಕೊಂಡು ಈ ಕಳವು ಕೃತ್ಯ ನಡೆಸಿರುವುದು ಸ್ಥಳೀಯ ಸೀಸಿ ಟೀವಿ ಫೂಟೇಜಿನಲ್ಲಿ ದಾಖಲಾಗಿದೆ. ಶನಿವಾರ ರಾತ್ರಿ ಬಂಟ್ವಾಳದಲ್ಲಿ ಭಾರೀ ಮಳೆಯಾಗಿ ವಿದ್ಯುತ್ ಸಂಪರ್ಕ ಕೂಡಾ ಕೈಕೊಟ್ಟಿರುವ ಸಂದರ್ಭವನ್ನು ಉಪಯೋಗಿಸಿಕೊಂಡ ಕಳ್ಳರು ಈ ಕೃತ್ಯ ನಡೆಸಿ ಪರಾರಿಯಾಗಿದ್ದಾರೆ. ಸಿಸಿ ಟೀವಿ ಫೂಟೇಜ್ ಸಂಗ್ರಹಿಸಿರುವ ಬಂಟ್ವಾಳ ನಗರಪೊಲೀಸರು ಈ ಎಲ್ಲಾ ಸರಣಿ ಕಳವು ಪ್ರಕರಣಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
0 comments:
Post a Comment