ಬಂಟ್ವಾಳ, ಡಿಸೆಂಬರ್ 08, 2023 (ಕರಾವಳಿ ಟೈಮ್ಸ್) : ಪ್ರಕರಣವೊಂದರ ಮಾತುಕತೆಯ ಬಗ್ಗೆ ತಗಾದೆ ಎತ್ತಿ ವ್ಯಕ್ತಿಯೊಬ್ಬರಿಗೆ ಹಾಗೂ ಆತನ ಸ್ನೇಹಿತನಿಗೆ ತಂಡವೊಂದು ಪಂಚ್ ಹಾಗೂ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ ಪ್ರಕರಣ ಕಾವಳಮುಡೂರು ಗ್ರಾಮದ ಕಾವಳಕಟ್ಟೆ ಬಸ್ ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ಕಾವಳಪಡೂರು ನಿವಾಸಿ ಮಹಮ್ಮದ್ ಶಮೀಮ್ (30) ಅವರು ಗುರುವಾರ ಬೆಳಿಗ್ಗೆ ತನ್ನ ನೆರೆಕರೆಯವರಾದ ಮಹಮ್ಮದ್ ಜುಬೈರ್, ಮಹಮ್ಮದ್ ಹನೀಫ್, ಮಹಮ್ಮದ್ ಫಯಾಜ್, ಮಹಮ್ಮದ್ ಶರೀಫ್ ಎಂಬವರೊಂದಿಗೆ ಕಾವಳಮುಡೂರು ಗ್ರಾಮದ ಕಾವಳಕಟ್ಟೆ ಬಸ್ ನಿಲ್ದಾಣದ ಬಳಿಯಿದ್ದಾಗ, ಆರೋಪಿಗಳಾದ ಪರಿಚಯದ ಮಹಮ್ಮದ್ ಫಜೀಮ್, ಮಹಮ್ಮದ್ ಇಮ್ರಾನ್, ಇರ್ಪಾನ್ ಬೊಂಬಿಕ್ಕು, ಹಂಝ ಆಲಂಗಾಲು, ರಹೀಂ ಧೂಮಳಿಕೆ ಅವರುಗಳು ಅಲ್ಲಿಗೆ ಬಂದು, ಶಮೀಮ್ ಅವರನ್ನು ಅಂಗಡಿಯಿಂದ ಹೊರಗೆ ಕರೆದು, ಹಿಂದಿನ ದಿನ ತರಕಾರಿ ಹನೀಫ್ ಎಂಬವರಿಗೆ ಸಂಬಂಧಿಸಿ ನಡೆದಿದ್ದ ಮಾತುಕತೆಯ ಬಗ್ಗೆ ತಕರಾರು ತೆಗೆದು, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಲ್ಲದೆ, ಆರೋಪಿಗಳ ಪೈಕಿ ಮಹಮ್ಮದ್ ಫಜೀಮ್ ಮತ್ತು ಇರ್ಪಾನ್ ಬೊಂಬಿಕ್ಕು ಮತ್ತು ಮಹಮ್ಮದ್ ಇಮ್ರಾನ್ ಅವರು ತಾವುಗಳು ತಂದಿದ್ದ ಪಂಚ್ ಹಾಗೂ ರಾಡ್ ನಿಂದ ಹಲ್ಲೆ ನಡೆಸಿರುತ್ತಾರೆ.
ಈ ಸಂದರ್ಭ ಜೊತೆಯಲ್ಲಿದ್ದವರು ಪ್ರತಿರೋಧಿಸಿದಾಗ, ಆರೋಪಿಗಳೆಲ್ಲರೂ ಅವರಿಗೂ ಕೂಡಾ ಪಂಚ್, ರಾಡ್ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಜನ ಸೇರುವುದನ್ನು ಕಂಡು ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಶಮೀಮ್, ಮಹಮ್ಮದ್ ಜುಬೈರ್, ಮಹಮ್ಮದ್ ಹನೀಫ್ ಅವರು ಪೂಂಜಾಲಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2023, ಕಲಂ 143, 147, 148, 323, 324, 504, 506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment