ಬೆಳ್ತಂಗಡಿ, ಡಿಸೆಂಬರ್ 24, 2023 (ಕರಾವಳಿ ಟೈಮ್ಸ್) : ನ್ಯಾಯಾಲಯದ ವ್ಯಾಜ್ಯ ಇರುವ ಜಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕ್ಷೇಪಿಸಿದ ವ್ಯಕ್ತಿಗೆ ಹಾಗೂ ಅವರ ಸಹೋದರ-ಸಹೋದರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದ ಕೊಂಕಡ್ಡ ಎಂಬಲ್ಲಿ ಶುಕ್ರವಾರ ನಡೆದಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕರಿಮಣೇಲು ನಿವಾಸಿ ಶೇಖ್ ಅಬ್ದುಲ್ ರಹಿಮಾನ್ (50) ಅವರು ವೇಣೂರು ಪೊಲೀಸರಿಗೆ ದೂರು ನೀಡಿದ್ದು, ಶುಕ್ರವಾರ (ಡಿ 22) ಬೆಳಿಗ್ಗೆ ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ಕೊಂಕಡ್ಡ ಎಂಬಲ್ಲಿ, ಆರೋಪಿ ಕೆ ಅಬೂಬಕ್ಕರ್ ಎಂಬಾತ ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಜಾಗದಲ್ಲಿ ಜೆ.ಸಿ.ಬಿ ಬಳಸಿ ಕೆಲಸ ಮಾಡುತ್ತಿದ್ದಾಗ ಶೇಖ್ ಅಬ್ದುಲ್ ರಹಿಮಾನ್ ಆಕ್ಷೇಪಿಸಿದ್ದಾರೆ. ಈ ಸಂದರ್ಭ ಆರೋಪಿ ಏಕಾಏಕಿ ಬಂದು ಅಬ್ದುಲ್ ರಹಿಮಾನ್ ಅವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದ ಅವರ ತಂಗಿ ಹಾಗೂ ಸಹೋದರನಿಗೂ ಆರೋಪಿ ಹಲ್ಲೆ ನಡೆಸಿದ್ದಲ್ಲದೇ, ತಂಗಿ ಜೊತೆ ಅನುಚಿತವಾಗಿ ವರ್ತಿಸಿರುತ್ತಾನೆ. ಅಲ್ಲದೆ ಅಬ್ದುಲ್ ರಹಿಮಾನ್ ಅವರ ಮೊಬೈಲನ್ನು ಬಿಸಾಡಿ, ಅವ್ಯಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಒಡ್ಡಿರುತ್ತಾನೆ ಎಂದು ದೂರಲಾಗಿದೆ. ಘಟನೆಯಿಂದ ಗಾಯಗೊಂಡ ಶೇಖ್ ಅಬ್ದುಲ್ ರಹಿಮಾನ್ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2023 ಕಲಂ 504, 323, 324, 354, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment