ಪುತ್ತೂರು, ಡಿಸೆಂಬರ್ 24, 2023 (ಕರಾವಳಿ ಟೈಮ್ಸ್) : ಪತ್ನಿ ಜೊತೆಗೆ ವ್ಯಕ್ತಿಗೆ ಇದ್ದ ಮನಸ್ತಾಪದ ಬಗ್ಗೆ ಮಾತುಕತೆ ನಡೆಸಲು ಇದೆ ಎಂದು ಕರೆದುಕೊಂಡು ಹೋಗಿ ಪತ್ನಿಯ ಸಂಬಂಧಿಕರು ಹಲ್ಲೆ ನಡೆಸಿದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು, ಅಕ್ಸಾನಗರ-ಚಿಕ್ಕಿಟ್ಟಿ ನಿವಾಸಿ ಸೈಯದ್ ಆಸೀಫ್ (28) ಎಂಬವರು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಆಸಿಫ್ ಹಾಗೂ ಅವರ ಪತ್ನಿ ಶಹನಾಜ್ ಅವರಿಗೂ ಹಿಂದಿನಿಂದಲೂ ಸಂಸಾರದಲ್ಲಿ ಮನಸ್ತಾಪವಿದ್ದು, ಆಸಿಫ್ ಅವರು ಡಿ 20 ರಂದು ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ರೆಂಜ ಎಂಬಲ್ಲಿರುವ ತನ್ನ ಪರಿಚಯದ ಹಮೀದ್ ಖಾನ್ ಅವರ ಬಾಡಿಗೆ ಮನೆಗೆ ತೆರಳಿ ಅಲ್ಲಿಯೇ ಉಳಿದುಕೊಂಡಿದ್ದರು. ರಾತ್ರಿ ವೇಳೆ ಆಸಿಫ್ ಅವರ ಪತ್ನಿಯ ಸಂಬಂಧಿಕರಾದ ಅಫ್ಲಾಲ್ ಮತ್ತು ಉನೈಸ್ ಹಾಗೂ ಇತರರು ಬಂದು ಪತ್ನಿಯ ಜೊತೆಗಿರುವ ಮನಸ್ತಾಪದ ಬಗ್ಗೆ ಮಾತನಾಡಲು ಇರುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾ ಮಾತುಕತೆ ನಡೆಸಿದ್ದಾರೆ.
ಬಳಿಕ ಆಸಿಫ್ ಅವರನ್ನು ಕಾರಿನಿಂದ ಕೆಳಗೆ ಇಳಿಸಿ ಎಲ್ಲರೂ ಸೇರಿ ಹಲ್ಲೆ ನಡೆಸಿ ಅಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಹಲ್ಲೆಯಿಂದಾದ ನೋವಿಗಾಗಿ ಆಸಿಫ್ ಅವರು ಡಿ 22 ರಂದು ಅರ್ಲಪದವು ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರವೂ ನೋವು ಕಡಿಮೆಯಾಗದ ಕಾರಣ ಡಿ 23 ರಂದು ಸಂಜೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2023 ಕಲಂ 323, 324, ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment