ಬಂಟ್ವಾಳ, ಡಿಸೆಂಬರ್ 31, 2023 (ಕರಾವಳಿ ಟೈಮ್ಸ್) : ಬಾರ್ ಶಾಪಿಗೆ ಸ್ನೇಹಿತರ ಜೊತೆ ಬಂದಿದ್ದ ವ್ಯಕ್ತಿಗೆ ಆರೋಪಿಯೋರ್ವ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿದ್ದಲ್ಲದೆ ವ್ಯಕ್ತಿ ಸಹಿತ ಸ್ನೇಹಿತರಿಗೂ ಚೂರಿಯಿಂದ ಇರಿದ ಘಟನೆ ಬಡಗಕಜೆಕಾರು ಗ್ರಾಮದ ಪಾಂಡವರಲ್ಲು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಇರಿತದಿಂದ ಗಾಯಗೊಂಡವರನ್ನು ಬಡಗಕಜೆಕಾರು ನಿವಾಸಿಗಳಾದ ಹರ್ಷಿತ್ ಎಂ (29), ಕೇಶವ, ಸನತ್ ಹಾಗೂ ಪ್ರವೀಣ ಎಂದು ಹೆಸರಿಸಲಾಗಿದ್ದು, ಆರೋಪಿ ವ್ಯಕ್ತಿಯನ್ನು ಪರಿಚಯದ ದೇವೊಟ್ಟು ನಿವಾಸಿ ಸುರೇಶ್ ಎಂದು ಗುರುತಿಸಲಾಗಿದೆ.
ಹರ್ಷಿತ್ ಅವರು ಶುಕ್ರವಾರ ರಾತ್ರಿ ತನ್ನ ಸ್ನೇಹಿತರಾದ ಕೇಶವ, ಸನತ್ ಹಾಗೂ ಪ್ರವೀಣ್ ಅವರೊಂದಿಗೆ ಪಾಂಡವರಕಲ್ಲಿನ ಬಾರಿಗೆ ಬಂದಿದ್ದ ವೇಳೆ ಅಲ್ಲಿಗೆ ಬಂದ ಆರೋಪಿ ಸುರೇಶ್ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾನೆ. ಬಳಿಕ ಹರ್ಷಿತ್ ಹಾಗೂ ಸ್ನೇಹಿತರನ್ನು ತಡೆದು ನಿಲ್ಲಿಸಿ ಕೈಯಲ್ಲಿದ್ದ ಸಣ್ಣ ಚೂರಿಯಿಂದ ತಿವಿದಿದ್ದಾನೆ. ಹರ್ಷಿತ್ ಅವರಿಗೆ ಹಲ್ಲೆ ಮಾಡುವುದನ್ನು ತಡೆಯಲು ಬಂದ ಪ್ರವೀಣ್ ಅವರಿಗೂ ಚಾಕು ಬೀಸಿದ ಪರಿಣಾಮ ಪ್ರವೀಣ್ ಅವರಿಗೂ ಗಾಯವಾಗಿದೆ. ಬಳಿಕ ಕೇಶ್ ಹಾಗೂ ಸನತ್ ಅವರು ಸುರೇಶ್ ಹಲ್ಲೆ ಮಾಡುವುದನ್ನು ತಡೆದಿರುತ್ತಾರೆ.
ಗಾಯಾಳು ಪ್ರವೀಣ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಹರ್ಷಿತ್ ಅವರು ಮಂಗಳೂರು ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment