ಬೆಳ್ತಂಗಡಿ, ಡಿಸೆಂಬರ್ 21, 2023 (ಕರಾವಳಿ ಟೈಮ್ಸ್) : ಪರವಾನಿಗೆ ಪಡೆದ ಜಿನಸು ಅಂಗಡಿ ಕಟ್ಟಡವನ್ನು ತಂಡವೊಂದು ದ್ವಂಸ ಮಾಡಿ ಅಂಗಡಿ ಮಾಲಕ ದಂಪತಿಗೆ ಹಲ್ಲೆ ನಡೆಸಿದ ಜೀವ ಬೆದರಿಕೆ ಒಡ್ಡಿದ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಆರಂಪಾರೆ ಎಂಬಲ್ಲಿ ಮಂಗಳವಾರ (ಡಿ 19) ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಬಾಜೆ ನಿವಾಸಿ ಲತಾ (48) ಅವರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಗಂಡ ಕೆ ಆರ್ ವಾಸು ಅವರು ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಆರಂಪಾದೆ ಎಂಬಲ್ಲಿ ಸುಮಾರು 25 ವರ್ಷಗಳ ಹಿಂದೆ ಸಿಮೆಂಟ್ ಶೀಟ್ ಛಾವಣಿಯ ಕಟ್ಟಡ ನಿರ್ಮಿಸಿ, ಅದರಲ್ಲಿ ಪರವಾನಿಗೆ ಪಡೆದು ಜಿನಸು ಅಂಗಡಿ ವ್ಯಾಪಾರ ಮಾಡಿಕೊಂಡಿರುತ್ತಾರೆ. ಸದರಿ ಜಾಗದ ತಕರಾರಿಗೆ ಸಂಬಂಧಿಸಿ, ಡಿ 14 ರಂದು ಆರೋಪಿಗಳಾದ ಟಿ ಕೆ ಮ್ಯಾಥ್ಯೂ ಮತ್ತು ಪ್ರಮೋದ್ ಎಂಬವರು ಸದ್ರಿ ಅಂಗಡಿ ಕಟ್ಟಡ ಇರುವ ಜಮೀನಿನ ಸುತ್ತ ಬೇಲಿ ನಿರ್ಮಾಣ ಮಾಡಿದ್ದು, ಸದ್ರಿ ಬೇಲಿಯನ್ನು ನಾನು ಮತ್ತು ನನ್ನ ಗಂಡ ತೆರವುಗೊಳಿಸಿದ್ದೆವು.
ಡಿ 19 ರಂದು ರಾತ್ರಿ ಆರೋಪಿಗಳಾದ ಟಿ ಕೆ ಮ್ಯಾಥ್ಯೂ, ಪ್ರಮೋದ್, ಸನೋಧ್ ಕುಮಾರ್, ಕುರಿಯಾಕೋಸ್, ಜಯರಾಜ, ಎನ್ ಎಮ್ ಕುರಿಯಾಕೋಸ್, ರೋಬಿನ್ಸ್, ಸಂತೋಷ್ ಯು ಜಿ ಮತ್ತು ಇತರ 15 ಜನರ ತಂಡ ಮಾರಕಾಯುಧಗಳನ್ನು ಹಿಡಿದುಕೊಂಡು ಅಂಗಡಿ ಕಟ್ಟಡ ಇರುವ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕಟ್ಟಡವನ್ನು ದ್ವಂಸ ಮಾಡಲು ಪ್ರಾರಂಭಿಸಿದ್ದಾರೆ. ಈ ವೇಳೆ ನಾವು ಆಕ್ಷೇಪಿಸಿದಾಗ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಲ್ಲದೇ ಅಂಗಡಿಯನ್ನು ದ್ವಂಸ ಮಾಡಿ ಸುಮಾರು 50 ಸಾವಿರ ರೂಪಾಯಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2023 ಕಲಂ 143, 147, 148, 447, 427, 341, 323, 504, 506(2) 395 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment