ಬಂಟ್ವಾಳ, ಡಿಸೆಂಬರ್ 21, 2023 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮದ ನಿವಾಸಿ ಜೋಸೆಫ್ ಜೋನ್ (72) ಅವರ ಜಮೀನಿಗೆ ತಂಡವೊಂದು ಅಕ್ರಮ ಪ್ರವೇಶಗೈದು ಗಿಡಗಳನ್ನು ನಾಶಗೊಳಿಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಜೋಸೆಫ್ ಅವರು ಠಾಣೆಗೆ ದೂರು ನೀಡಿದ್ದು, ನಾವೂರು ಗ್ರಾಮದಲ್ಲಿರುವ ತನ್ನ ಮಗ ಬೋಮಿ ಜಾನ್ ಎಂಬಾತನ ಹೆಸರಿನಲ್ಲಿರುವ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದು, ಸದ್ರಿ ಜಮೀನಿಗೆ ಆರೋಪಿಗಳಾದ ಜೂಲಿಯಾನಾ ಡಿ’ಸೋಜ, ತೋಮಸ್ ಮೆನೆಜಸ್, ಜೋಯ್ ವಾಲ್ಟರ್, ಎಡ್ಚಿನ್ ಡಿ’ಸೋಜ, ಲೀನಾ ಮೆನೆಜಸ್ ಹಾಗೂ ಮೇರಿ ರೆಬೆಲ್ಲೊ ಎಂಬವರುಗಳು ಅಕ್ರಮ ಕೂಟ ಸೇರಿಕೊಂಡು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಮೀನಿಗೆ ಅಳವಡಿಸಿದ್ದ ಬೇಲಿಯನ್ನು ಕಿತ್ತಿ ಹಾಕಿ ಸುಮಾರು 10 ರಿಂದ 15 ಅಡಿಕೆ ಗಿಡಗಳನ್ನು ಹಾಗೂ 4 ತೆಂಗಿನ ಗಿಡಗಳನ್ನು ಕಿತ್ತು ಬಿಸಾಕಿರುತ್ತಾರೆ. ಜಮೀನಿನಲ್ಲಿ ಬದಿಯಲ್ಲಿ ನೀರು ಹೋಗುವ ಕಣಿಯನ್ನು ಮುಚ್ಚಿರುತ್ತಾರೆ. ಈ ಬಗ್ಗೆ ಆಕ್ಷೇಪಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಕಡಿದು ಕೊಲ್ಲುವುದಾಗಿ ಬೆದರಿಕೆ ಹಾಕಿ ಜನ ಬರುವುದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳ ಕೃತ್ಯದಿಂದ ಸುಮಾರು 1 ಲಕ್ಷ ರೂಪಾಯಿಯಷ್ಟು ನಷ್ಟ ಉಂಟಾಗಿರುತ್ತದೆ ಎಂದು ಜೋಸೆಫ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment