ಬಂಟ್ವಾಳ, ಡಿಸೆಂಬರ್ 22, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟು ಮೈದಾನದ ಬಳಿ ಅಂಗಡಿಯಲ್ಲಿ ಸಾಮಾಗ್ರಿ ಖರೀದಿಸುವ ನೆಪದಲ್ಲಿ ಕಳೆದ ಡಿ 14 ರಂದು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಕಳವಾದ ಸೊತ್ತು ಸಹಿತ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕು, ಬೈಕಂಪಾಡಿ-ಅಂಗರಗುಂಡಿ ಪ್ರಿಯದರ್ಶಿನಿ ಸರ್ಕಲ್ ನಿವಾಸಿ ಜನಾರ್ದನ ಪೂಜಾರಿ ಅವರ ಪುತ್ರ ಅಶೋಕ್ (34) ಹಾಗೂ ಬೋಳಾರು ಶೇಡಿಗುರಿ-ದಂಬೇಲ್, ಎಸ್ ಡಿ ಎಂ ಶಾಲಾ ಬಳಿಯ ಲೀಲಾ ಕಂಪೌಂಡ್ ನಿವಾಸಿ ಸುಂದರ ಪೂಜಾರಿ ಅವರ ಪುತ್ರ ಸಚಿನ್ (34) ಎಂದು ಹೆಸರಿಸಲಾಗಿದೆ.
ಬಂಧಿತ ಆರೋಪಿಗಳಿಂದ 50 ಸಾವಿರ ರೂಪಾಯಿ ಮೌಲ್ಯದ ಒಂದೂವರೆ ಪವನ್ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ 25 ಸಾವಿರ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಡಿ 14 ರಂದು ಮಧ್ಯಾಹ್ನ ಸುಮಾರು 2.40 ರ ವೇಳೆಗೆ ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ನಿವಾಸಿ ದಿವಂಗತ ಗೋಪಾಲಕೃಷ್ಣ ಅವರ ಪತ್ನಿ ಸರೋಜಿನಿ (72) ಅವರು ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ಮೈದಾನ ಬಳಿ ನವೀನ್ ಕುಲಾಲ ಅವರ ಮಹಾಲಕ್ಷ್ಮೀ ಜನರಲ್ ಸ್ಟೋರ್ ಅಂಗಡಿಯಲ್ಲಿ ಇರುವ ವೇಳೆ ಬೈಕಿನಲ್ಲಿ ಇಬ್ಬರು ಬಂದು, ಬೈಕಿನಲ್ಲಿದ್ದ ಹಿಂಬದಿ ಸವಾರ ಅಂಗಡಿಗೆ ಬಂದು ವಿಮಲ್ ಹಾಗೂ ಚಾಕಲೇಟ್ ಕೇಳಿದ್ದು, ಸಾಮಾನು ನೀಡಿದ ಸರೋಜಿನಿಗೆ ಆರೋಪಿ 20 ರೂಪಾಯಿಯ 2 ನೋಟುಗಳನ್ನು ನೀಡಿದ್ದಾನೆ. ಆರೋಪಿಗೆ 10 ರೂಪಾಯಿ ವಾಪಾಸು ನೀಡಲು ಮಹಿಳೆ ಡ್ರಾವರಿನೊಳಗೆ ನೋಡುತ್ತಿದ್ದಾಗ, ಆರೋಪಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಬೈಕಿನಲ್ಲಿ ಪರಾರಿಯಾಗಿರುತ್ತಾನೆ ಎಂದು ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಜಿಲ್ಲಾ ಎಸ್ಪಿ ರಿಷ್ಯಂತ್ ಸಿ ಬಿ ಅವರ ನಿರ್ದೇಶನದಂತೆ ಜಿಲ್ಲಾ ಎಡಿಶನಲ್ ಎಸ್ಪಿ ಧರ್ಮಪ್ಪ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಕೆ ವಿ, ಪಿಎಸ್ಸೈಗಳಾದ ರಾಮಕೃಷ್ಣ, ಕಲೈಮಾರ್ ಪಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್ ಸಿ ಗಳಾದ ಇರ್ಷಾದ್ ಪಿ, ರಾಜೇಶ್ ಎಸ್, ಗಣೇಶ್ ಎನ್, ಪಿಸಿಗಳಾದ ಮೋಹನ ವೈ ಎ ವಿವೇಕ್ ಕೆ ಅವರ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
0 comments:
Post a Comment