ಬೆಂಗಳೂರು, ಡಿಸೆಂಬರ್ 19, 2023 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಇದರಲ್ಲಿ 4,663 ಕೋಟಿ ರೂಪಾಯಿ ಇನ್‍ಪುಟ್ ಸಬ್ಸಿಡಿ, 12,577 ಕೋಟಿ ರೂಪಾಯಿ ತುರ್ತು ಪರಿಹಾರ, 566 ಕೋಟಿ ರೂಪಾಯಿ ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂಪಾಯಿ ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಸಿಎಂ ಕೋರಿದ್ದಾರೆ.
ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎನ್.ಡಿ.ಆರ್.ಎಫ್. ನಿಂದ 4,663 ಕೋಟಿ ರೂಪಾಯಿ ಇನ್‍ಪುಟ್ ಸಬ್ಸಿಡಿ ಒದಗಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.
ರೈತರಿಗೆ ಇನ್‍ಪುಟ್ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿರುವ ಸಿಎಂ ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬರಪೀಡಿತ ತಾಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದ ಸಲ್ಲಿಸಲಾಗಿತ್ತು. ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಆದ್ದರಿಂದ ಅಕ್ಟೋಬರ್ 20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್.ಡಿ.ಆರ್.ಎಫ್. ಅಡಿ 17,901 ಕೋಟಿ ರೂಪಾಯಿ ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ 12,577 ಕೋಟಿ ರೂಪಾಯಿ ಮೊತ್ತವೂ ಸೇರಿದೆ. ನವೆಂಬರ್ 4 ರಂದು ಹೆಚ್ಚುವರಿಯಾಗಿ 7 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177 ಕೋಟಿ ರೂಪಾಯಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‍ಪುಟ್ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದ ಸಿಎಂ ಸಿದ್ದರಾಮಯ್ಯ ಬರದಿಂದ ಸಂಕಷ್ಟದಲ್ಲಿರುವ ಕರ್ನಾಟಕದ ರೈತರ ಹಿತರಕ್ಷಣೆಯ ದೃಷ್ಟಿಯಿಂದ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ಕೋರಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಜೊತೆಗಿದ್ದರು.
0 comments:
Post a Comment