ಕೊರೋನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ, ಆತಂಕಪಡಬೇಕಾದ ಅಗತ್ಯವಿಲ್ಲ, ಕ್ರಿಸ್ಮಸ್-ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ : ಸಿಎಂ ಸಿದ್ದರಾಮಯ್ಯ - Karavali Times ಕೊರೋನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ, ಆತಂಕಪಡಬೇಕಾದ ಅಗತ್ಯವಿಲ್ಲ, ಕ್ರಿಸ್ಮಸ್-ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ : ಸಿಎಂ ಸಿದ್ದರಾಮಯ್ಯ - Karavali Times

728x90

21 December 2023

ಕೊರೋನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ, ಆತಂಕಪಡಬೇಕಾದ ಅಗತ್ಯವಿಲ್ಲ, ಕ್ರಿಸ್ಮಸ್-ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಡಿಸೆಂಬರ್ 21, 2023 (ಕರಾವಳಿ ಟೈಮ್ಸ್) : ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ನಾವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಬಗ್ಗೆ ಯಾರೊಬ್ಬರೂ ಆತಂಕಪಡಬೇಕಾದ ಅಗತ್ಯವಿಲ್ಲ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಗುಂಪು ಸೇರುವ ಸಂದರ್ಭದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸಂಭ್ರಮದ ಜೊತೆಗೆ ನಿಮ್ಮ ಆರೋಗ್ಯದ ಕಾಳಜಿಯನ್ನು ವಹಿಸಿ. ಸುರಕ್ಷಿತವಾಗಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೋವಿಡ್ ನಿರ್ವಹಣೆಗೆ ಸರಕಾರದ ಬಳಿ ಸಾಕಷ್ಟು ಹಣ ಇದೆ. ಹಣಕಾಸಿಗೆ ಕೊರತೆ ಇಲ್ಲ. ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಇನ್ನಿತರೆ ಯಾವುದಕ್ಕೂ ಕೊರತೆ ಆಗದಂತೆ ಆಸ್ಪತ್ರೆಗಳು ಸಜ್ಜಾಗಬೇಕು ಎಂದು ಕರೆ ನೀಡಿದರು. 

ಈಗಿನ ಉಪತಳಿ ಜೆಎನ್1 (ಒಮಿಕ್ರಾನ್ ಉಪತಳಿ) ಆಗಿದೆ. ಇದು ಅಪಾಯಕಾರಿಯಲ್ಲ. ಈ ಉಪತಳಿ ರಾಜ್ಯದಲ್ಲಿ 92 ಜನರಲ್ಲಿ ಪತ್ತೆಯಾಗಿದೆ. ಬೆಂಗಳೂರಲ್ಲಿ 80 ಜನರಲ್ಲಿ ಪತ್ತೆಯಾಗಿದ್ದು, 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಉಳಿದವರು ಮನೆಯಲ್ಲೇ ಇದ್ದಾರೆ. 20 ರಲ್ಲಿ  7 ಮಂದಿ ಐಸಿಯುನಲ್ಲಿದ್ದಾರೆ. ಅವರು ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವ ಕಾರಣಕ್ಕೆ ಐಸಿಯುನಲ್ಲಿದ್ದಾರೆ.

ರಾಜ್ಯದಲ್ಲಿ ನಿತ್ಯ 5,000 ಬೆಂಗಳೂರಲ್ಲಿ ಸಾವಿರ ಕೊರೊನಾ ಟೆಸ್ಟ್ ನಡೆಯುತ್ತಿದೆ. ಕ್ಯಾಬಿನೆಟ್ ಉಪಸಮಿತಿ ರಚಿಸಲಾಗುವುದು, ಅವರು ಸಲಹಾ ಸಮಿತಿ ಜತೆ ಸಂಪರ್ಕದಲ್ಲಿದ್ದು ನಿರಂತರ ನಿಗಾ ಇಡಲು ಸೂಚಿಸಲಾಗಿದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಪೂರ್ತಿಯಾಗಿ ಜಾರಿ ಮಾಡುವಂತೆ ಹೇಳಿದ್ದೇನೆ. ಗಡಿ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ ಮಾಡಬೇಕು. ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿದ್ದರೆ ಸಾಕು ಎಂದ ಸಿಎಂ ಸಿದ್ದರಾಮಯ್ಯ ಜನಸಂದಣಿಯಲ್ಲಿ ಮಾಸ್ಕ್ ಧರಿಸಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸದ್ಯ ರಾಜ್ಯದಲ್ಲಿ 60 ವರ್ಷ ಕೆಳಗಿನವರಿಗೆ ಮಾಸ್ಕ್ ಕಡ್ಡಾಯವಿಲ್ಲ. ಜನಸಂದಣಿಗೆ ಹೋಗುವವರು ಮಾಸ್ಕ್ ಧರಿಸಿದರೆ ಒಳ್ಳೆಯದು ಎಂದು ಮನವಿ ಮಾಡಿದರು. 

ಕೋವಿಡ್ ಚಿಕಿತ್ಸೆಗೆ ನಿಗದಿಪಡಿಸಲಾದ ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ ಇರಲಿದೆ. ಎಲ್ಲಾ ಜಿಲ್ಲೆಗಳಲ್ಲೂ ಆಕ್ಸಿಜನ್, ಬೆಡ್, ವೆಂಟಿಲೇಟರ್ ಸೇರಿ ಕೋವಿಡ್ ಸಂಬಂಧಿತ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಲಸಿಕೆಗಳನ್ನು ಸಿದ್ಧವಿಟ್ಟುಕೊಳ್ಳಲು ಸೂಚಿಸಲಾಗಿದೆ. ಈಗಲೇ ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎನ್ನುವ ಸಲಹೆ ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರಿಂದ ಬಂದಿದೆ ಎಂದರು. ಮಾಧ್ಯಮದವರು, ಸುದ್ದಿ ವಾಹಿನಿಯವರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು. 

  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ, ಆತಂಕಪಡಬೇಕಾದ ಅಗತ್ಯವಿಲ್ಲ, ಕ್ರಿಸ್ಮಸ್-ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ : ಸಿಎಂ ಸಿದ್ದರಾಮಯ್ಯ Rating: 5 Reviewed By: karavali Times
Scroll to Top