ಬೆಂಗಳೂರು, ಡಿಸೆಂಬರ್ 27, 2023 (ಕರಾವಳಿ ಟೈಮ್ಸ್) : ಪ್ರಸಕ್ತ ಅಂದರೆ 2023-24ನೇ ಶೈಕ್ಷಣಿಕ ವರ್ಷದಿಂದ 5, 8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧರಿಸಿರುವ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2024ರ ಮಾರ್ಚ್ ತಿಂಗಳಲ್ಲಿ ಈ ಎಲ್ಲಾ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಗಳು ನಡೆಯಲಿದ್ದು, ವೇಳಾಪಟ್ಟಿ ಪ್ರಕಾರ ಮಾರ್ಚ್ 11 ರಿಂದ 18ರವರೆಗೆ ಪಬ್ಲಿಕ್ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಗೆ ಸಜ್ಜಾಗುವಂತೆ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ಶಾಲೆಗಳಿಗೆ ಹಾಗೂ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ. ಪಬ್ಲಿಕ್ ಪರೀಕ್ಷೆ ನಡೆಯಲಿರುವ ಈ ಎಲ್ಲಾ ತರಗತಿಗಳಿಗೆ ಈ ಬಾರಿ ಪರೀಕ್ಷಾ ಮಂಡಳಿಯೇ ಪ್ರಶ್ನೆ ಪತ್ರಿಕೆ ಸಿದ್ದಪಡಿಸಲಿದೆ.
5ನೇ ತರಗತಿ ಪಬ್ಲಿಕ್ ಪರೀಕ್ಷಾ ವೇಳಾಪಟ್ಟಿ
ಮಾರ್ಚ್ 11 ರಂದು ಪ್ರಥಮ ಭಾಷೆ ಕನ್ನಡ, ಮಾರ್ಚ್ 12 ರಂದು ದ್ವಿತೀಯ ಭಾಷೆ ಇಂಗ್ಲಿಷ್, ಮಾರ್ಚ್ 13 ರಂದು ಪರಿಸರ ಅಧ್ಯಯನ, ಮಾರ್ಚ್ 14ರಂದು ಗಣಿತ ಪರೀಕ್ಷೆಗಳು ನಡೆಯಲಿದ್ದು, ಈ ಎಲ್ಲ ಪರೀಕ್ಷೆಗಳು ಅಪರಾಹ್ನ 2.30 ರಿಂದ ಸಂಜೆ 4.30ರವರೆಗೆ ನಡೆಯಲಿವೆ.
8-9 ನೇ ತರಗತಿ ಪಬ್ಲಿಕ್ ಪರೀಕ್ಷಾ ವೇಳಾಪಟ್ಟಿ :
ಮಾರ್ಚ್ 11 ರಂದು ಪ್ರಥಮ ಭಾಷೆ ಕನ್ನಡ, ಮಾರ್ಚ್ 12 ರಂದು ದ್ವಿತೀಯ ಭಾಷೆ ಇಂಗ್ಲಿಷ್, ಮಾರ್ಚ್ 13 ರಂದು ತೃತೀಯ ಭಾಷೆ ಹಿಂದಿ, ಮಾರ್ಚ್ 14 ರಂದು ಗಣಿತ, ಮಾರ್ಚ್ 15 ರಂದು ವಿಜ್ಞಾನ, ಮಾರ್ಚ್ 16 ರಂದು ಸಮಾಜ ವಿಜ್ಞಾನ, ಮಾರ್ಚ್ 18 ರಂದು ದೈಹಿಕ ಶಿಕ್ಷಣ ಪರೀಕ್ಷೆಗಳು ನಡೆಯಲಿದ್ದು, ಈ ಎಲ್ಲಾ ಪರೀಕ್ಷೆಗಳು ಅಪರಾಹ್ನ 2.30 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿವೆ.
ಪರೀಕ್ಷೆಗಳು ಆಯಾ ಶಾಲಾ ಹಂತದಲ್ಲಿಯೇ ನಡೆಯಲಿದ್ದು, ತಾಲೂಕು ಹಂತದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ. ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಸಂಬಂಧಪಟ್ಟ ತಾಲೂಕುಗಳ ಬಿಇಒ ಗಳಿಗೆ ಕಳುಹಿಸಲಾಗುತ್ತದೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮಗೆ ಅವಶ್ಯವಿರುವಷ್ಟು ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿಕೊಂಡು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.
0 comments:
Post a Comment