ಉಡುಪಿ, ನವೆಂಬರ್ 15, 2023 (ಕರಾವಳಿ ಟೈಮ್ಸ್) : ಉಡುಪಿಯ ನೇಜಾರಿನಲ್ಲಿ ನವೆಂಬರ್ 12 ರಂದು ಭಾನುವಾರ ನಡೆದ ತಾಯಿ ಹಾಗೂ ಮೂವರು ಮಕ್ಕಳ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ಅರುಣ್ ಚೌಗಲೆ (39) ಎಂಬ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಸಂಜೆ ವೇಳೆಗೆ ತನಿಖೆ ಮಾಡಿ ಪೂರ್ಣ ಸಂಗತಿ ಬಯಲು ಮಾಡಲಿದ್ದೇವೆ ಎಂದು ಉಡುಪಿ ಜಿಲ್ಲಾ ಎಸ್ಪಿ ಡಾ ಅರುಣ್ ಮಾಧ್ಯಮಗಳಿಗೆ ಬುಧವಾರ ಬೆಳಿಗ್ಗೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಸ್ಥಳವೊಂದರಿಂದ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಟೆಕ್ನಿಕಲ್ ಎನಾಲಿಸಿಸ್ ಹಾಗೂ ಹ್ಯೂಮನ್ ಇಂಟೆಲಿಜೆನ್ಸ್ ಮಾಹಿತಿ ಮೇರೆಗೆ ವ್ಯಕ್ತಿಯನ್ನು ಉಡುಪಿಗೆ ಕರೆದುಕೊಂಡು ಬಂದು ವಿಚಾರಣೆ ಕೈಗೊಳ್ಳಲಾಗಿದೆ. ಸಂಜೆಯೊಳಗೆ ತನಿಖೆ ಮಾಡಿ ಸ್ಪಷ್ಟ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುತ್ತೇವೆ ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದೇವೆ. ಊಹಾಪೋಹಗಳ ಬಗ್ಗೆ ಜಾಗರೂಕರಾಗಿರಲು ಜಿಲ್ಲೆಯ ಎಲ್ಲಾ ಕಡೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಿದ್ದೇವೆ. ಬಲವಾದ ಶಂಕೆಯ ಮೇರೆಗೆ ಪ್ರವೀಣ್ ಅರುಣ್ ಚೌಗಲೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್ಪಿ ಡಾ ಅರುಣ್ ತಿಳಿಸಿದ್ದಾರೆ.
0 comments:
Post a Comment