ಬೆಳ್ತಂಗಡಿ, ನವೆಂಬರ್ 03, 2023 (ಕರಾವಳಿ ಟೈಮ್ಸ್) : ಕೌಟುಂಬಿಕ ಕಲಹದ ಕಾರಣಕ್ಕಾಗಿ ಅಳಿಯನೇ ಮಾವನಿಗೆ ಸ್ಕೂಟರ್ ಡಿಕ್ಕಿ ಹೊಡೆದು ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಂಬಳದಡ್ಡು ಸಾರ್ವಜನಿಕ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಅಳಿಯನಿಂದ ಹಲ್ಲೆಗೊಳಗಾದ ಮಾವನನ್ನು ಮಿತ್ತಬಾಗಿಲು ನಿವಾಸಿ ಕೆ ಎಚ್ ಇಬ್ರಾಹಿಂ ಶಾಫಿ (60) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪುತ್ರ ಮುಹಮ್ಮದ್ ರಫೀಕ್ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ತಂದೆ ಇಬ್ರಾಹಿಂ ಶಾಫಿ ಅವರು ಗುರುವಾರ ಕಾಜೂರು ಮಸೀದಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ನಿಮಿತ್ತ ಮಕ್ಕಳು ಹಾಗೂ ಹೆಂಗಸರನ್ನು ಅವರ ಅಕ್ಕನ ಮನೆಗೆ ಬಿಡಲು ಹೋದವರು ರಾತ್ರಿಯಾದರೂ ಮನೆಗೆ ವಾಪಾಸು ಬಾರದೆ ಇದ್ದ ಹಿನ್ನಲೆಯಲ್ಲಿ ಹುಡುಕಾಡಲು ಸ್ಕೂಟರಿನಲ್ಲಿ ತೆರಳಿದ್ದಾರೆ. ಕಂಬಳದಡ್ಡು ಎಂಬಲ್ಲಿ ಆರೋಪಿ ಸಹೋದರಿಯ ಪತಿ ಮುಹಮ್ಮದ್ ಶಾಫಿ ತಂದೆಯವರಿಗೆ ಸ್ಕೂಟರ್ ಡಿಕ್ಕಿ ಹೊಡೆಸಿ ರಸ್ತೆಗೆ ಬೀಳಿಸಿದ ಬಳಿಕ ಕೈಯಿಂದ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ನನ್ನನ್ನು ನೋಡಿ ಆರೋಪಿ ಸ್ಕೂಟರ್ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆರೋಪಿ ಮುಹಮ್ಮದ್ ಶಾಫಿಯು ನಮ್ಮ ತಂದೆಯವರಾದ ಇಬ್ರಾಹಿಂ ಶಾಫಿ ಅವರನ್ನು ಸ್ಕೂಟರ್ ಡಿಕ್ಕಿ ಹೊಡೆದು ಕೊಲೆ ನಡೆಸುವ ಪ್ರಯತ್ನ ನಡೆಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಫೀಕ್ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2023 ಕಲಂ 279, 326, 323, 307 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment