ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸಲು ಸರಕಾರ ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ
ಉಡುಪಿ, ನವೆಂಬರ್ 17, 2023 (ಕರಾವಳಿ ಟೈಮ್ಸ್) : ಉಡುಪಿ ಜಿಲ್ಲೆಯ ನೇಜಾರಿನಲ್ಲಿ ಒಂದೇ ಕುಟುಂಬದ ತಾಯಿ ಹಾಗೂ ಮೂವರು ಮಕ್ಕಳ ಕೊಲೆಯಾದ ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಕುಟುಂಬಿಕರ ಜೊತೆ ಕೆಲಕಾಲ ಆತ್ಮೀಯವಾಗಿ ಕಳೆದ ಸಚಿವೆ ಹೆಬ್ಬಾಳ್ಕರ್, ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸಲು ಸರಕಾರದ ವತಿಯಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ಕೊಲೆ ಪ್ರಕರಣದ ತ್ವರಿತ ವಿಚಾರಣೆ ನಡೆಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣವನ್ನು ತ್ವರಿತಗೊಳಿಸಲು ಸರಕಾರವು ಕುಟುಂಬಕ್ಕೆ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು.
ಜನವಸತಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ಥ ಕುಟುಂಬದೊಂದಿಗೆ ಸರಕಾರ ಇರಲಿದೆ. ಆರೋಪಿಗಳನ್ನು ತಕ್ಷಣವೇ ಬಂಧಿಸುವ ಮೂಲಕ ಉಡುಪಿ ಪೆÇಲೀಸರು ಶ್ಲಾಘನೀಯ ಕೆಲಸ ಮಾಡಿದ್ದಾರೆ. ನಾನು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದೇನೆ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಉಡುಪಿಯ ಜನರು ಶಾಂತಿಯನ್ನು ಪ್ರೀತಿಸುತ್ತಿದ್ದು, ಈ ಘಟನೆ ಅವರ ಮನಸ್ಸಿನಲ್ಲಿ ಭಯ ಮೂಡಿಸಿದೆ. ಇಂತಹ ಘಟನೆಗಳು ನಡೆಯಬಾರದಿತ್ತು. ವಿಶೇಷವಾಗಿ ವಸತಿ ಪ್ರದೇಶಗಳಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಉಡುಪಿ ಜಿಲ್ಲೆಯಲ್ಲಿ ಸಿಸಿಟಿವಿ ಹಾಗೂ ಇತರೆ ಕಣ್ಗಾವಲು ವ್ಯವಸ್ಥೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಡಿಸಿ ಮತ್ತು ಎಸ್ಪಿ ಜತೆ ಮಾತನಾಡುತ್ತೇನೆ ಎಂದು ಇದೇ ವೇಳೆ ಸಚಿವರು ಹೇಳಿದರು.
ನಾಲ್ವರ ಕೊಲೆ ಆರೋಪಿಯು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಸೈಕೋನಂತೆ ಕಾಣುತ್ತಾನೆ. 20 ನಿಮಿಷದಲ್ಲಿ ನಾಲ್ಕು ಕೊಲೆ ಮಾಡಿರುವ ಆರೋಪಿಯ ಮಾನಸಿಕ ಸ್ಥಿತಿ ನಮ್ಮ ಊಹೆಗೂ ನಿಲುಕದ್ದು ಎಂದು ಸಚಿವರು ಆರೋಪಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಉಡುಪಿ ಜಿಲ್ಲಾ ಎಸ್ಪಿ ಡಾ ಕೆ ಅರುಣ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಸಹಿತ ವಿವಿಧ ಅಧಿಕಾರಿಗಳು, ಮುಖಂಡರು ಜೊತೆಗಿದ್ದರು.
0 comments:
Post a Comment