ಉಡುಪಿ, ನವೆಂಬರ್ 16, 2023 (ಕರಾವಳಿ ಟೈಮ್ಸ್) : ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ಮನೆಯೊಂದಕ್ಕೆ ನುಗ್ಗಿ 15 ನಿಮಿಷದೊಳಗೆ ನಾಲ್ವರನ್ನು ಬರ್ಬರವಾಗಿ ಇರಿದು ಕೊಲೆಗೈದ ಆರೋಪಿ ಪ್ರವೀಣ್ ಅರುಣ್ ಚೌಗುಲೆ (39) ಯನ್ನು ಸ್ಥಳ ಮಹಜರಿಗಾಗಿ ಪೊಲೀಸರು ಗುರುವಾರ ನೇಜಾರಿನ ಮನೆಗೆ ಕರೆ ತಂದಾಗ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಆರೋಪಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಆಕ್ರೋಶಿತ ಜನರನ್ನು ಸಮಾಧಾನ ಪಡಿಸಲು ಯತ್ನಿಸಿದ ಪೊಲೀಸರು ವಿಫಲರಾದಾಗ ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸ್ಥಳದಲ್ಲಿ ಲಾಠಿ ಬೀಸಿದರು. ಆಕ್ರೋಶಿತ ಸ್ಥಳೀಯರ ಗುಂಪು ಆರೋಪಿ ನಾಲ್ವರನ್ನು ಕೊಲ್ಲಲು 15 ನಿಮಿಷ ಉಪಯೋಗಿಸಿಕೊಂಡಿದ್ದರೆ, ಆತನನ್ನು ನಮ್ಮ ಕೈಗೆ 30 ಸೆಕೆಂಡುಗಳ ಕಾಲ ಮಾತ್ರ ಕೊಡಿ. ನಾವೇ ಶಿಕ್ಷೆ ಕೊಡುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು.
ಲಾಠಿಚಾರ್ಜ್ ನಡೆಸಿದ ಪೊಲೀಸರ ವಿರುದ್ದವೂ ಆಕ್ರೋಶಿತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು. ಈ ಸಂದರ್ಭ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣವೂ ನಿರ್ಮಾಣವಾಯಿತು. ಜನರ ಆಕ್ರೋಶದ ನಡುವೆಯೂ ಪೊಲೀಸರು ಆರೋಪಿಯೊಂದಿಗೆ ಸ್ಥಳ ಮಹಜರು ನಡೆಸಿ ವಾಪಾಸು ಕರೆದುಕೊಂಡು ಹೋಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಉಡುಪಿ ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು ಸ್ಥಳ ಪರಿಶೀಲನೆ ವೇಳೆ ಸ್ಥಳದಲ್ಲಿ ಜಮಾಯಿಸಿದ ಜನ ಆಕ್ರೋಶ ವ್ಯಕ್ತಪಡಿಸಿ ಅಡ್ಡಿಪಡಿಸಿದಾಗ ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದ್ದೇವೆ. ಗುಂಪನ್ನು ಚದುರಿಸಿ ಆರೋಪಿಯನ್ನು ವಾಪಸ್ ಕರೆದುಕೊಂಡು ಹೋಗಲಾಯಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾವು ಸಮಾಜದ ಮುಖಂಡರೊಂದಿಗೆ ಚರ್ಚಿಸುತ್ತೇವೆ ಮತ್ತು ಶಾಂತಿ ಕಾಪಾಡುವಂತೆ ಸಮುದಾಯವನ್ನು ವಿನಂತಿಸುತ್ತೇವೆ ಎಂದರು.
0 comments:
Post a Comment