ಪುತ್ತೂರು, ನವೆಂಬರ್, 11, 2023 (ಕರಾವಳಿ ಟೈಮ್ಸ್) : ಓಮ್ನಿ ಕಾರು ಡಿಕ್ಕಿ ಹೊಡೆದು ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ತಾಯಿ ಮಕ್ಕಳು ಗಾಯಗೊಂಡ ಘಟನೆ ಶನಿವಾರ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕೋರoಬಡ್ಕ ಸರಕಾರಿ ಶಾಲಾ ಬಳಿ ಸಂಭವಿಸಿದೆ.
ಗಾಯಾಳುಗಳನ್ನ ಕೊಳ್ತಿಗೆ ಗ್ರಾಮದ ನಿವಾಸಿ, ಸ್ಕೂಟರ್ ಚಾಲಕಿ ಹರಿಣಾಕ್ಷಿ, ಅವರ ಮಕ್ಕಳಾದ ವಿದ್ಯಾಶ್ರೀ (19) ಹಾಗೂ ಆಕೆಯ ತಂಗಿ ನವ್ಯಶ್ರೀ ಎಂದು ಹೆಸರಿಸಲಾಗಿದೆ.
ತಾಯಿ ಹರೀನಾಕ್ಷಿ ಅವರು ಸವಾರಿ ಮಾಡಿಕೊಂಡಿದ್ದ ಸ್ಕೂಟರಿನಲ್ಲಿ ಹಿಂಬದಿ ಸವಾರರಾಗಿ ಇಬ್ಬರು ಕುಳಿತುಕೊಂಡು ಸಂಚರಿಸುತ್ತಿದ್ದ ವೇಳೆ ಕೊಳ್ತಿಗೆ ಗ್ರಾಮದ ಕೋರoಬಡ್ಕ ಸರಕಾರಿ ಶಾಲಾ ಬಳಿ ತಲುಪಿದಾಗ ಜೋನ್ ಪೀಟರ್ ಎಂಬವರು ಚಲಾಯಿಸಿಕೊಂಡು ಬಂದ ಓಮ್ನಿ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸ್ಕೂಟರ್ ಮಗುಚಿ ಬಿದ್ದು ಜಖಂಗೊಂಡಿದ್ದು, ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೂ ಗಾಯವಾಗಿರುತ್ತದೆ. ಗಾಯಾಳುಗಳನ್ನು ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಇಬ್ಬರು ಮಕ್ಕಳಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು, ತಾಯಿ ಹರಿಣಾಕ್ಷಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment