ಬಂಟ್ವಾಳ, ನವೆಂಬರ್ 24, 2023 (ಕರಾವಳಿ ಟೈಮ್ಸ್) : ಸೇತುವೆ ಬದಿಗಳಲ್ಲಿ ಅಳವಡಿಸಿದ ಕಬ್ಬಿಣದ ಕಮಾನು ಮಾಯ... ಬ್ಯಾನರ್ ಪ್ರತ್ಯಕ್ಷ..... ತಾಲೂಕಿನ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆ ರಿಜೆಕ್ಟ್ ಆಗಿ ಹಲವು ವರ್ಷಗಳು ಕಳೆದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ಬಂಟ್ವಾಳ ಪುರಸಭೆ ಇತ್ತೀಚೆಗÀಷ್ಟೆ ಘನ ವಾಹನ ಸಂಚಾರ ನಿಷೇಧಿಸಲು ಕಬ್ಬಿಣದ ರಾಡ್ ಅಳವಡಿಸಿ ಕಮಾನು ಅಳವಡಿಸಿತ್ತು. ಆದರೆ ಗುತ್ತಿಗೆದಾರರ ಪೂರ್ಣ ನಿರ್ಲಕ್ಷ್ಯದಿಂದ ಅಳವಡಿಸಿದ ಒಂದೇ ದಿನದಲ್ಲಿ ಗೂಡ್ಸ್ ಟೆಂಪೋ ಡಿಕ್ಕಿಯಾಗಿ ಕಮಾನು ನೆಲಕ್ಕುರುಳಿ ಬಿದ್ದು ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿ ಹೋಗಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸೇತುವೆಯ ಎರಡೂ ಬದಿಗಳಲ್ಲಿ ಅಳವಡಿಸಿದ್ದ ಕಬ್ಬಿಣದ ಕಮಾನು ಮಾಯವಾಗಿ ಸೇತುವೆಯ ಎರಡು ಬದಿಗಳಲ್ಲಿ ಪುರಸಭೆಯ ಎಚ್ಚರಿಕೆಯ ಬ್ಯಾನರ್ ಪ್ರತ್ಯಕ್ಷಗೊಂಡಿದೆ.
ಅಕ್ಟೋಬರ್ ತಿಂಗಳಲ್ಲಿ ಸೇತುವೆಯ ಮೇಲಿನ ಡಾಮರಿನಲ್ಲಿ ಸಣ್ಣ ಬಿರುಕು ಕಂಡು ಬಂದ ಹಿನ್ನಲೆಯಲ್ಲಿ ಸಾರ್ವಜನಿಕರು ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋ ಹಂಚಿಕೊಂಡು ಅಧಿಕಾರಿಗಳ ಗಮನ ಸೆಳೆದಿದ್ದರು. ಅದರಂತೆ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಅವರು ಘನ ವಾಹನ ಸಂಚಾರಕ್ಕೆ ಬ್ರೇಕ್ ಹಾಕುವಂತೆ ಪುರಸಭೆಗೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ವಾರದ ಬಳಿಕ ಎಚ್ಚೆತ್ತುಕೊಂಡ ಪುರಸಭೆ ಸೇತುವೆಯ ಎರಡೂ ಬದಿಗಳಿಗೆ ಕಬ್ಬಿಣ ರಾಡ್ ಮೂಲಕ ಕಮಾನು ಅಳವಡಿಸಿತ್ತು. ಆದರೆ ಕಮಾನು ನಿರ್ಮಾಣದ ಗುತ್ತಿಗೆ ವಹಿಸಿಕೊಂಡವರು ಗುಣಮಟ್ಟದ ಕಮಾನು ನಿರ್ಮಾಣ ಮಾಡದೆ ನಾಮ್ ಕಾವಾಸ್ತೆ ಕಮಾನು ನಿರ್ಮಿಸಿತ್ತಲ್ಲದೆ ಘನ ವಾಹನ ಸಂಚಾರಕ್ಕೆ ನಿರ್ಬಂಧಿಸಿ ಕಮಾನು ಹಾಕಿದ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನೂ ಅಳವಡಿಸದೆ ಇದ್ದ ಪರಿಣಾಮ ಎಂದಿನಂತೆ ಸಂಚರಿಸಿದ ಗೂಡ್ಸ್ ಟೆಂಪೋ ಡಿಕ್ಕಿಯಾಗಿ ಕಬ್ಬಿಣದ ರಾಡ್ ತುಂಡಾಗಿ ನೆಲಕ್ಕುರುಳಿತ್ತು. ವಾಹನ ಸಂಚಾರದ ನಿಬಿಡತೆ ಏನಾದರೂ ಇದ್ದಿದ್ದರೆ ಭಾರೀ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ವಾಹನ ಸಂಚಾರ ಕಡಿಮೆ ಇದ್ದುದರಿಂದ ಸಂಭಾವ್ಯ ಅಪಾಯ ತಪ್ಪಿಹೋಗಿ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದರು. ಆ ಬಳಿಕ ತಿಂಗಳವರೆಗೂ ಯಾವುದೇ ಕ್ರಮ ಜರಗಿರಲಿಲ್ಲ. ಕಮಾನು ಸರಿಪಡಿಸುವ ಕಾಮಗಾರಿಯೂ ನಡೆದಿರಲಿಲ್ಲ. ಇದೀಗ ತಿಂಗಳ ಬಳಿಕ ಹಠಾತ್ ಆಗಿ ಸೇತುವೆಯ ಎರರೂ ಬದಿಗಳಲ್ಲಿ ಬ್ಯಾರಿಕೇಡರಿಗೆ ಪುರಸಭೆ ಎಚ್ಚರಿಕಾ ಬ್ಯಾನರ್ ಅಳವಡಿಸಿರುವುದು ಕಂಡು ಬಂದಿದೆ. ಆದರೆ ಸೇತುವೆಯ ಉಳಿವಿಗೆ ಹಾಗೂ ಈ ಸೇತುವೆ ಮೂಲಕವೇ ಅಸ್ತಿತ್ವ ಕಂಡುಕೊಂಡಿರುವ ಗೂಡಿನಬಳಿ, ಅಕ್ಕರಂಗಡಿ, ಪಾಣೆಮಂಗಳೂರು, ಆಲಡ್ಕ ಈ ಊರುಗಳ ಉಳಿವಿಗೆ ಸ್ಥಳೀಯಾಡಳಿತದ ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಾಗಲೀ ಯಾವುದೇ ಕ್ರಮ ಕೈಗೊಳ್ಳುವ ಸೂಚನೆ ಕಂಡು ಬರುತ್ತಿಲ್ಲ ಎಂದು ಸ್ಥಳೀಯ ಪುರವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಊರಿನ ಅಸ್ತಿತ್ವಕ್ಕೆ ಬೇಕಾಗಿ ತುರ್ತು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಪ್ರತಿಭಟನೆಯ ಮೂಲಕ ಸಂಬಂಧಪಟ್ಟವರನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ಸ್ಥಳೀಯ ನಾಗರಿಕರು ಹೇಳುತ್ತಿದ್ದಾರೆ.
ಕಳೆದ ಸುಮಾರು 10 ವರ್ಷಗಳಿಗಿಂತಲೂ ಹಿಂದೆ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯಲ್ಲಿ ಬಿರುಕು ಕಂಡು ಬಂದ ಹಿನ್ನಲೆಯಲ್ಲಿ ಈ ಸೇತುವೆ ಘನ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂದು ಸರಕಾರಿ ಇಂಜಿನಿಯರುಗಳು ಷರಾ ಬರೆದಿದ್ದು, ಬಳಿಕ ಇದರ ಪೂರ್ಣ ನಿರ್ವಹಣೆಯ ಹೊಣೆಯನ್ನು ಬಂಟ್ವಾಳ ಪುರಸಭೆಗೆ ಹಸ್ತಾಂತರಿಸಲಾಗಿತ್ತು. ಗೂಡಿನಬಳಿ, ಅಕ್ಕರಂಗಡಿ, ಪಾಣೆಮಂಗಳೂರು, ಆಲಡ್ಕ ಈ ಪ್ರದೇಶಗಳ ಅಸ್ತಿತ್ವದ ದೃಷ್ಟಿಯಿಂದ ಈ ಸೇತುವೆಗೆ ಕಾಯಕಲ್ಪ ಒದಗಿಸಿ ಅಗತ್ಯ ಸಾರಿಗೆ ಬಸ್ ಸಹಿತ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸರಕಾರ ಪುರಸಭೆಗೆ ಸೂಚಿಸಿತ್ತು. ಅದರಂತೆ ಪುರಸಭೆ ಬಿ ಸಿ ರೋಡು ಹಾಗೂ ಮೆಲ್ಕಾರಿನಲ್ಲಿ ಶಿಥಿಲ ಸೇತುವೆ ಸಂಚಾರಕ್ಕೆ ನಿರ್ಬಂಧ ಎಂಬ ನಾಮಫಲಕ ಹಾಕಿ ಅಷ್ಟಕ್ಕೆ ಕೈ ತೊಳೆದುಕೊಂಡಿತ್ತೇ ವಿನಃ ಯಾವುದೇ ಅಗತ್ಯ ಕ್ರಮ ಕೈಗೊಂಡಿರಲಿಲ್ಲ.
0 comments:
Post a Comment