ಉಡುಪಿ, ನವೆಂಬರ್ 12, 2023 (ಕರಾವಳಿ ಟೈಮ್ಸ್) : ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅಟೋ ರಿಕ್ಷಾದಲ್ಲಿ ಬಂದು ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಯೋರ್ವ ತಾಯಿ ಹಾಗೂ ಮೂರು ಮಂದಿ ಮಕ್ಕಳನ್ನು ಇರಿದು ಕೊಂದು ಹಾಕಿದ ಹೃದಯ ವಿದ್ರಾವಕ ಘಟನೆ ಉಡುಪಿಯ ಹಂಪನಕಟ್ಟೆ ಸಮೀಪದ ನೇಜಾರಿನ ತೃಪ್ತಿ ಲೇಔಟ್‍ನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಕೃತ್ಯದ ಕಾರಣ ಇನ್ನೂ ನಿಗೂಢವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಹಸೀನಾ (48), ಮಕ್ಕಳಾದ ಅಫ್ಸಾನ್ (23), ಅಯ್ನಾಜ್ (20) ಹಾಗೂ ಅಸೀಮ್ (14) ಕೊಲೆಯಾದ ತಾಯಿ ಮಕ್ಕಳು. ಮನೆಯಲ್ಲಿದ್ದ ಹಸೀನಾ ಅವರ ಅತ್ತೆಗೂ ಇರಿಯಲಾಗಿದ್ದು, ಅವರಿಗೂ ಗಂಭೀರ ಗಾಯಗಳಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾವ ಉದ್ದೇಶಕ್ಕೆ ಕೊಲೆಯಾಗಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಮನೆಯಲ್ಲಿ ಯಾವ ವಸ್ತುಗಳು ಕಳವು ನಡೆದಿಲ್ಲ. ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ಅರುಣ್ ತಿಳಿಸಿದ್ದಾರೆ.
ಭಾನುವಾರ ಮುಂಜಾನೆ 8.30 ರ ವೇಳೆಗೆ ಘಟನೆ ನಡೆದಿದೆ. ಮಾಸ್ಕ್ ಹಾಕಿಕೊಂಡು ಅಟೋ ರಿಕ್ಷಾದಲ್ಲಿ ಬಂದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಏಕಾಏಕಿ ಮನೆಗೆ ನುಗ್ಗಿದ ವ್ಯಕ್ತಿ ಮೊದಲು ಮಹಿಳೆ ಹಾಗೂ ಮಕ್ಕಳಾದ ಹಸಿನಾ, ಅಫ್ಸಾನ್ ಹಾಗೂ ಅಯ್ನಾಜ್ ಗೆ ಚಾಕುವಿನಿಂದ ಇರಿಯಲಾಗಿದೆ. ಬೊಬ್ಬೆ ಕೇಳಿ ಹೊರಗೆ ಆಟವಾಡುತ್ತಿದ್ದ ಮತ್ತೋರ್ವ ಮಗ ಆಸೀಮ್ ಓಡಿ ಬಂದಿದ್ದು, ಆತನನ್ನೂ ದುಷ್ಕರ್ಮಿ ಇರಿದು ಕೊಂದಿದ್ದಾನೆ.
ಬೊಬ್ಬೆ ಕೇಳಿ ಹೊರಗಡೆ ಬಂದ ಪಕ್ಕದ ಮನೆ ಯುವತಿಯನ್ನು ದುಷ್ಕರ್ಮಿ ಬೆದರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇರಿತದಿಂದ ಗಂಭೀರ ಗಾಯಗೊಂಡ ಅತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆ ಮಾಲಿಕ ವಿದೇಶದಲ್ಲಿ ಉದ್ಯೋಗಿಯಾಗಿದ್ದಾರೆ ಎನ್ನಲಾಗಿದೆ. ಉಡುಪಿ ಜಿಲ್ಲಾ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತಗೆ ಎಲ್ಲಾ ಆಯಾಮಗಳಿಂದ ತನಿಖೆ ತೀವ್ರಗೊಳಿಸಿದ್ದಾರೆ.
0 comments:
Post a Comment