ಬಂಟ್ವಾಳ, ನವೆಂಬರ್ 18, 2023 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳು ಇಂದು ಸಿಗುತ್ತಿರುವ ಶೈಕ್ಷಣಿಕ ಅವಕಾಶಗಳನ್ನು ಬಳಸಿಕೊಂಡು ವಿದ್ಯಾವಂತರಾಗಬೇಕು. ಇಂದು ಸಣ್ಣಸಣ್ಣ ವಿಚಾರಗಳಿಗೆ ಜನರು ನ್ಯಾಯಾಲಯಗಳ ಮೊರೆಹೋಗುತ್ತಿರುವುದು ಸಾಮಾನ್ಯವಾಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಸರಿಯಾದ ಶಿಕ್ಷಣ ಸಿಕ್ಕಿದ್ದೇ ಆದಲ್ಲಿ ನ್ಯಾಯಾಲಯಗಳಿಗೆ ಅಲೆದಾಡುವ ಪರಿಸ್ಥಿತಿ ಕಡಿಮೆಯಾಗಬಹುದು ಎಂದು ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ವೈ ತಳವಾರ ಅಭಿಪ್ರಾಯಪಟ್ಟರು.
ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ, ವಕೀಲರ ಸಂಘ ಬಂಟ್ವಾಳ ಹಾಗೂ ಎಸ್ ವಿ ಎಸ್ ಕಾಲೇಜು ಬಂಟ್ವಾಳ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ಅಬ್ದುಲ್ ಜಲೀಲ್ ಮಾತನಾಡಿ, ವ್ಯಕ್ತಿಯು ಜನನದಿಂದ ಮರಣದವರೆಗೂ ಕಾನೂನಿನ ವ್ಯಾಪ್ತಿಯಲ್ಲಿ ಇರುತ್ತಾನೆ. ಹಾಗಾಗಿ ಎಲ್ಲರಲ್ಲೂ ಕಾನೂನು ಸೇವೆಗಳ ಅರಿವು ಇರಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ ಸುಯೋಗ ವರ್ಧನ್ ಡಿ ಎಂ ಮಾತನಾಡಿ, ಕಾನೂನು ಎಂಬುದು ದೇಶದ ಜನರ ರಕ್ಷಣೆಗೆ ಇರುವಂತಹ ಒಂದು ಶ್ರೇಷ್ಠ ಸಾಧನ. ಇದಕ್ಕಾಗಿ ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ. ಇದು ಪ್ರಜಾಪ್ರಭುತ್ವದ ಇತರೆ ಅಂಗಗಳಾದ ಶಾಸಕಾಂಗ, ಕಾರ್ಯಾಂಗದಷ್ಟೇ ಪ್ರಮುಖವಾದುದು. ಇದರ ಕುರಿತಾಗಿ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಕಾನೂನಿನ ಮಾಹಿತಿ ಇರಬೇಕು ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಬೈರಿಕಟ್ಟೆ, ಸಹಾಯಕ ಸರಕಾರಿ ಅಭಿಯೋಜಕರು ಹಾಗೂ ಕಾರ್ಯನಿರ್ವಾಹಕ ಕಾರ್ಯದರ್ಶಿ ಶ್ರೀಮತಿ ಹರಿಣಿ ಕುಮಾರಿ ಡಿ ಉಪಸ್ಥಿತರಿದ್ದರು. ಎಸ್ ವಿ ಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ ಸ್ವಾಗತಿಸಿ, ಕಾಲೇಜು ಕಾನೂನು ಘಟಕದ ಸಂಯೋಜಕ ಡಾ ವಿನಾಯಕ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಶ್ರದ್ಧಾ ಹಾಗೂ ತಂಡ ಪ್ರಾರ್ಥನೆ ನೆರವೇರಿಸಿದರು. ನ್ಯಾಯಾಲಯದ ಸಿಬ್ಬಂದಿ ವರ್ಗ, ಕಾಲೇಜು ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
0 comments:
Post a Comment