ಮಂಗಳೂರು, ನವೆಂಬರ್ 18, 2023 (ಕರಾವಳಿ ಟೈಮ್ಸ್) : ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ-ಧರ್ಮದಿಂದ ನೋಡುವಂತಿಲ್ಲ. ಎಲ್ಲವನ್ನು ಕೂಡ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದ್ದು, ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ಕೊಡುವ ಗೌರವ ಅಲ್ಲ. ಬದಲಾಗಿ ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಕೊಡುವ ಗೌರವವಾಗಿದೆ. ಅಲ್ಲಿ ಕೂರುವ ನಾವು ಗೌರವ ಉಳಿಸುವ ಕೆಲಸ ಮಾಡಬೇಕು ಎನ್ನುವ ಮೂಲಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರು ಸಚಿವ ಝಮೀರ್ ಅಹ್ಮದ್ ಅವರ ವಿವಾದಾತ್ಮಕ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ಹಾಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರಕಾರ ಮುಸ್ಲಿಂ ಶಾಸಕರಿಗೆ ನೀಡಿದ ಗೌರವದ ಸ್ಥಾನಮಾನಗಳನ್ನು ಹೊಗಳುವ ಭರದಲ್ಲಿ ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಝಮೀರ್ ಅಹ್ಮದ್ ಖಾನ್ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿತಿಸಿದ ಸ್ಪೀಕರ್ ಖಾದರ್ ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ಜಾತಿ-ಧರ್ಮದ ಆಧಾರದಲ್ಲಿ ಯಾರು ಕೂಡಾ ಆ ಪೀಠದಲ್ಲಿ ನನ್ನನ್ನು ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಕೂರಿಸಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ನಾನು ಎಲ್ಲರಿಗೂ ಗೌರವ ಕೊಟ್ಟು ಗೌರವ ಪಡೆಯುತ್ತೇನೆ. ಎಲ್ಲರ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತೇನೆ. ಸ್ಪೀಕರ್ ಸ್ಥಾನವನ್ನು ಜಾತಿ ಧರ್ಮ ಬಿಟ್ಟು ನೋಡಬೇಕು ಎಂದವರು ತಿಳಿಸಿದರು.
ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಜಮೀರ್ ಅವರು, ಭಾಷಣದ ವೇಳೆ ಕರ್ನಾಟಕ ಕಾಂಗ್ರೆಸ್ ಸರಕಾರದಲ್ಲಿ ಮುಸ್ಲಿಂ ಶಾಸಕರಿಗೆ ನೀಡಿದ ಗೌರವದ ಸ್ಥಾನಮಾನಗಳ ಬಗ್ಗೆ ಬಹುಪರಾಕ್ ವ್ಯಕ್ತಪಡಿಸುವ ಭರದಲ್ಲಿ ಸ್ಪೀಕರ್ ಸ್ಥಾನದ ಬಗ್ಗೆ ಪಕ್ಷದ ಸೊತ್ತು ಎಂಬ ರೀತಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದರು.
ಮುಸ್ಲಿಮರಲ್ಲಿ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಈ ಪೈಕಿ 7 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಅದರಲ್ಲಿ 5 ಜನರಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನಗೆ 3 ಖಾತೆ ನೀಡಿ ಮಂತ್ರಿ ಮಾಡಿದೆ. ರಹೀಂ ಖಾನ್ ಮಂತ್ರಿಯಾಗಿದ್ದಾರೆ. ಸಲೀಂ ಅಹ್ಮದ್ ವಿಪ್ ಆಗಿದ್ದಾರೆ. ನಸೀರ್ ಅಹ್ಮದ್ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ರಾಜಕೀಯ ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿರಲಿಲ್ಲ. ಈಗ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಈಗ ದೊಡ್ಡ ದೊಡ್ಡ ಬಿಜೆಪಿ ನಾಯಕರು ಕೂಡಾ ಸ್ಪೀಕರ್ ಯು ಟಿ ಖಾದರ್ ಅವರಿಗೆ ನಮಸ್ಕಾರ ಎನ್ನುತ್ತಾರೆ. ಇದನ್ನು ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷ ಎಂದು ಹೇಳಿಕೆ ನೀಡಿದ್ದರು. ಇದೀಗ ರಾಜಕೀಯ ವಲಯದಲ್ಲಿ ತೀವ್ರ ವಿವಾದವನ್ನು ಸೃಷ್ಟಿ ಹಾಕಿತ್ತು. ಈ ಬಗ್ಗೆ ಇದೀಗ ಸ್ವತಃ ಸ್ಪೀಕರ್ ಖಾದರ್ ಅವರೇ ಪ್ರತಿಕ್ರಯಿಸಿ ಝಮೀರ್ ಅಹ್ಮದ್ ಅವರ ಮಾತಿಗೆ ಆಕ್ಷೇಪ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
0 comments:
Post a Comment