ಬೆಳ್ತಂಗಡಿ, ನವೆಂಬರ್ 25, 2023 (ಕರಾವಳಿ ಟೈಮ್ಸ್) : ತಾಲೂಕಿನ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿ ನೌಫಲ್ ಎಂಬವರು ತನ್ನ ಮನೆಯ ಶೆಡ್ಡಿನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರು ಕಳವಿಗೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಠಾಣಾ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಕಾರು ಸಮೇತ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕು, ತಾಳಿಪ್ಪಾಡಿ ಗ್ರಾಮದ, ಪುನರೂರು ಅಂಚೆ ವ್ಯಾಪ್ತಿಯ ಕಿನ್ನಿಗೋಳಿ ನಿವಾಸಿ ಅಜಯ್ (32), ಬೆಳ್ತಂಗಡಿ ತಾಲೂಕು, ಸೋಣಂದೂರು ಗ್ರಾಮದ ಗಾಣದಬೆಟ್ಟು ನಿವಾಸಿ ಸೂರಜ್ ಶೆಟ್ಟಿ (23), ಇಳಂತಿಲ ಗ್ರಾಮದ ನಿವಾಸಿ ಮಂಜುನಾಥ ಪೂಜಾರಿ (30) ಹಾಗೂ ಬಂಟ್ವಾಳ ತಾಲೂಕು, ಶಂಭೂರು ಗ್ರಾಮದ ನಿವಾಸಿ ಕಿಶೋರ್ ಟಿ (32) ಎಂದು ಹೆಸರಿಸಲಾಗಿದೆ.
ಬಂಧಿತ ಆರೋಪಿಗಳಿಂದ ಕಳವು ಮಾಡಿದ KA 02 MD 9042 ನೋಂದಣಿ ಸಂಖ್ಯೆಯ ಇನ್ನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಳ್ಳಾಲ ನಿವಾಸಿ ಇಸಾಕ್ ಎಂಬವರಿಗೆ ಸೇರಿದ ಇನ್ನೋವಾ ಕಾರನ್ನು ಅವರ ಸಂಬಂಧಿ ನೌಫಲ್ ಎಂಬವರು ನ 9 ರಂದು ರಾತ್ರಿ ಕಕ್ಕಿಂಜೆ ಮನೆಯ ಶೆಡ್ಡಿನಲ್ಲಿ ನಿಲ್ಲಿಸಿದ್ದು ನ 10 ರಂದು ಬೆಳಿಗ್ಗೆ ನೋಡಿದ ಕಾರು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
0 comments:
Post a Comment