ವಗ್ಗ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ‘ಪ್ರಾಚ್ಯ ಪ್ರಜ್ಞೆ’ ಕಾರ್ಯಕ್ರಮ
ಬಂಟ್ವಾಳ, ನವೆಂಬರ್ 19, 2023 (ಕರಾವಳಿ ಟೈಮ್ಸ್) : ಪ್ರಾಚೀನ ನಾಗರಿಕತೆ ಮತ್ತು ವಿವಿಧತೆಯಲ್ಲಿ ಏಕತೆ ಮೂಲಕ ಜಗತ್ತಿನಲ್ಲೇ ವೈಶಿಷ್ಟ್ಯಪೂರ್ಣವಾಗಿ ಗುರುತಿಸಿಕೊಂಡಿರುವ ಭಾರತದ ಇತಿಹಾಸ ಮತ್ತು ಇಲ್ಲಿನ ಪ್ರಾಚ್ಯ ಸಂಪತ್ತುಗಳ ಅರಿವು ಯುವಜನತೆಗೆ ಮೂಡಿಸಲು ಶಿಕ್ಷಣ ಇಲಾಖೆ ಅವಿರತ ಶ್ರಮಿಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಎಂ ಜಿ ಹೇಳಿದರು.
ಕಾವಳಪಡೂರು ಗ್ರಾಮದ ವಗ್ಗ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ‘ಪ್ರಾಚ್ಯ ಪ್ರಜ್ಞೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಾಲ್ಯದಿಂದಲೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದರ ಜೊತೆಗೆ ನಾಯಕತ್ವ ಮೂಲಕ ಇತಿಹಾಸ ನಿರ್ಮಿಸಲು ಇತಿಹಾಸದ ಅರಿವು ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ ಜಿನರಾಜ ಅರಿಗ ಮಾತನಾಡಿ, ಸರಕಾರಿ ಶಾಲೆ ಉಳಿಸಲು ಕನ್ನಡ ಭಾಷೆ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವುದರ ಮೂಲಕ ಅನಗತ್ಯ ಖರ್ಚು ಕಡಿಮೆಗೊಳಿಸಿ ಮೂಲಭೂತ ಸೌಕರ್ಯ ಒದಗಿಸಲು ಸರಕಾರ ಗರಿಷ್ಟ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್, ಉಪನ್ಯಾಸಕ ವಿಲ್ಫ್ರೆಡ್ ಪ್ರಕಾಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಝ್, ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಜೋಯೆಲ್ ಲೋಬೋ ಶುಭ ಹಾರೈಸಿದರು.
ಕಾವಳಪಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್, ದೈಹಿಕ ಶಿಕ್ಷಕರ ಪರಿವೀಕ್ಷಕ ವಿಷ್ಣು ಹೆಬ್ಬಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ರತ್ನಾವತಿ, ಪ್ರಮುಖರಾದ ತನ್ವೀರ್, ಮಹಮ್ಮದ್ ತುಂಬೆ ಮೊದಲಾದವರು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕ ಆದಂ ಸಾಹೇಬ್ ಸ್ವಾಗತಿಸಿ, ಜಿಲ್ಲಾ ನೋಡೆಲ್ ಅಧಿಕಾರಿ ಶೋಭಾ ಎನ್ ಪ್ರಸ್ತಾವನೆಗೈದರು. ಶಿಕ್ಷಕಿ ಹೆಲೆನ್ ಜುಲಿಯಾನ ಸಿಕ್ವೇರ ವಂದಿಸಿ, ಶಿಕ್ಷಕಿ ಲೈಲಾ ಪರ್ವೀನ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment