ಬಂಟ್ವಾಳ, ನವೆಂಬರ್ 09, 2023 (ಕರಾವಳಿ ಟೈಮ್ಸ್) : ಮದುವೆ ನಿಶ್ಚಿತಾರ್ಥ ಸಂದರ್ಭ ಸ್ನೇಹಿತೆಗೆ ನೀಡಿದ ಚಿನ್ನಾಭರಣಗಳನ್ನು ಬಳಿಕ ವಾಪಾಸು ನೀಡದೆ ವಂಚಿಸಿದ ಬಗ್ಗೆ ಬಿ ಮೂಡ ಗ್ರಾಮದ ನಿವಾಸಿ ಸಂಧ್ಯಾ (31) ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಧ್ಯಾ ಅವರು ಕಳೆದ ಎಪ್ರಿಲ್ 23 ರಂದು ವಿದೇಶಕ್ಕೆ ತೆರಳಲು ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದಾಗ ಅವರ ಸ್ನೇಹಿತೆ ಆರೋಪಿ ಅಶ್ಚಿನಿ ಎಂಬಾಕೆ ತನ್ನ ಮದುವೆಯಾಗುವ ಹುಡುಗ ಎಂದು ಹೇಳಿ ಪರಿಚಯಿಸಿದ ಶ್ರೀಕಾಂತ್ ಎಂಬಾತನೊಂದಿಗೆ ಬಂದು ತನ್ನ ನಿಶ್ಚಿತಾರ್ಥಕ್ಕಾಗಿ ಚಿನ್ನಾಭರಣಗಳನ್ನು ನೀಡುವಂತೆ ವಿನಂತಿಸಿಕೊಂಡ ಹಿನ್ನಲೆಯಲ್ಲಿ ಸಂಧ್ಯಾ ಅವರು ಅವರ ತಾಯಿಯ ಬಳಿ ಇದ್ದ ತನ್ನ ಚಿನ್ನಾಭರಣಗಳನ್ನು ಕೊಡುವಂತೆ ತಿಳಿಸಿ ವಿದೇಶಕ್ಕೆ ತೆರಳಿದ್ದರು. ಸಂಧ್ಯಾ ತಿಳಿಸಿದ ಮೇರೆಗೆ ಅವರ ತಾಯಿ ಆರೋಪಿ ಅಶ್ಚಿನಿ ಅವರಿಗೆ ಸುಮಾರು 32.70 ಗ್ರಾಂ ತೂಕದ ಚಿನ್ನದ ನಕ್ಲೇಶ್, ಸುಮಾರು 15.100 ಗ್ರಾಂ ತೂಕದ ಚಿನ್ನದ ಕೈ ಬಳೆ, ಸುಮಾರು 2.200 ಗ್ರಾಂ ತೂಕದ ವಜ್ರದ 1 ಜೊತೆ ಕಿವಿಯೋಲೆ, ಸುಮಾರು 17.200 ಗ್ರಾಂ ತೂಕದ ಚಿನ್ನದ ಕೈ ಬಳೆ, ಸುಮಾರು 8 ಗ್ರಾಂ ತೂಕದ ಚಿನ್ನದ ಬಳೆ, ಸುಮಾರು 8 ಗ್ರಾಂ ತೂಕದ ಚಿನ್ನದ ಪೆಂಡೆಂಟ್, ಸುಮಾರು 8 ಗ್ರಾಂ ತೂಕದ ಚಿನ್ನದ ರಿಂಗ್, 19 ಗ್ರಾಂ ತೂಕದ ಚಿನ್ನದ ಸರ ಚಿನ್ನಾಭರಣಗಳನ್ನು ನೀಡಿರುತ್ತಾರೆ.
ಕೆಲ ಸಮಯದ ಬಳಿಕ, ಸಂದ್ಯಾ ಅವರು ಚಿನ್ನಾಭರಣಗಳನ್ನು ಹಿಂತಿರುಗಿಸುವಂತೆ, ಆರೋಪಿಗಳಾದ ಅಶ್ಚಿನಿ ಹಾಗೂ ಶ್ರೀಕಾಂತ್ ಅವರನ್ನು ಕೇಳಿಕೊಂಡಾಗ ಹಿಂತಿರುಗಿಸದಿದ್ದು, ಅ 10 ರಂದು ಮೇಲ್ಕಾಣಿಸಿದ ಸುಮಾರು 17.200 ಗ್ರಾಂ ತೂಕದ ಚಿನ್ನದ ಕೈ ಬಳೆ, ಸುಮಾರು 8 ಗ್ರಾಂ ತೂಕದ ಚಿನ್ನದ ಬಳೆ, ಸುಮಾರು 8 ಗ್ರಾಂ ತೂಕದ ಚಿನ್ನದ ಪೆಂಡೆಂಟ್, ಸುಮಾರು 8 ಗ್ರಾಂ ತೂಕದ ಚಿನ್ನದ ರಿಂಗ್ ಇವುಗಳನ್ನು ಮಾತ್ರ ಹಿಂತಿರುಗಿಸಿರುತ್ತಾರೆ. ಉಳಿದ ಚಿನ್ನಾಭರಣಗಳನ್ನು ಈವರೆಗೆ ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 133/2023 ಕಲಂ 420 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment